ಬೆಂಗಳೂರು : ಕರ್ನಾಟಕ ವಿಧಾನ ಮಂಡಲದಲ್ಲಿ ಶಾಸಕರು ಹಾಗೂ ಎಂಎಲ್ ಸಿ ಗಳು ಪಾಲಿಸಬೇಕಾದ ನಿಯಮಗಳ ಕುರಿತು ಇಲ್ಲಿದೆ ಮಾಹಿತಿ
ಸದಸ್ಯರು ಪಾಲಿಸಬೇಕಾದ ನಿಯಮಗಳು
324. ಸದನದಲ್ಲಿ ಉಪಸ್ಥಿತರಿದ್ದಾಗ ಸದಸ್ಯರು ಪಾಲಿಸಬೇಕಾದ ನಿಯಮಗಳು: ಸಭೆಯ ಉಪವೇಶನದಲ್ಲಿ ಸದಸ್ಯನು ;
(1) ಸದನದ ಕಾರ್ಯಕಲಾಪಕ್ಕೆ ಸಂಬಂಧಿಸಿರುವುದನ್ನು ಹೊರತು, ಯಾವುದೇ ಪುಸ್ತಕ, ವಾರ್ತಾ ಪತ್ರಿಕೆ ಅಥವಾ ಕಾಗದವನ್ನು ಓದತಕ್ಕುದಲ್ಲ.
(2) ಯಾವನೇ ಸದಸ್ಯನು ಮಾತನಾಡುತ್ತಿರುವಾಗ ಅವನಿಗೆ ದುರ್ವಚನೆಗಳಿಂದ ಅಥವಾ ಏರುಸ್ವರದಿಂದ ಅಥವಾ ಇತರ ಯಾವುದೇ ಕ್ರಮಬಾಹಿರ ರೀತಿಯಲ್ಲಿ ತೊಂದರೆಯುಂಟು ಮಾಡತಕ್ಕುದಲ್ಲ.
(3) ಸದನವನ್ನು ಪ್ರವೇಶಿಸುವಾಗ ಅಥವಾ ಅಲ್ಲಿಂದ ನಿರ್ಗಮಿಸುವಾಗ ಮತ್ತು ತಮ್ಮ ಜಾಗದಲ್ಲಿ ಕುಳಿತುಕೊಳ್ಳುವಾಗ ಅಥವಾ ಜಾಗವನ್ನು ಬಿಡುವಾಗ ಸಭಾಧ್ಯಕ್ಷರಿಗೆ ವಂದಿಸತಕ್ಕದ್ದು.
(4) ಸಭಾಧ್ಯಕ್ಷರ ಮತ್ತು ಮಾತನಾಡುತ್ತಿರುವ ಸದಸ್ಯರ ಮಧ್ಯೆ ಹಾದು ಹೋಗತಕ್ಕುದಲ್ಲ ;
(5) ಸಭಾಧ್ಯಕ್ಷರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವಾಗ ಸದನವನ್ನು ತ್ಯಜಿಸತಕ್ಕುದಲ್ಲ.
(6) ಯಾವಾಗಲೂ ಸಭಾಧ್ಯಕ್ಷರನ್ನು ಸಂಬೋಧಿಸಿ ಮಾತನಾಡತಕ್ಕುದು.
(7) ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ತನ್ನ ಸ್ಥಾನದಲ್ಲಿರತಕ್ಕುದು.
(8) ಸದನದಲ್ಲಿ ಮಾತನಾಡದೇ ಇರುವ ಸಮಯದಲ್ಲಿ ನಿಶ್ಯಬ್ದವಾಗಿರತಕ್ಕುದು.
(9) ಸಭೆಯ ಕಾರ್ಯವಿಧಿಗೆ ತಡೆ ಅಥವಾ ವಿಘ್ನವನ್ನು ತರತಕ್ಕುದಲ್ಲ ಮತ್ತು ಸದನದಲ್ಲಿ ಭಾಷಣವಾಗುತ್ತಿರುವಾಗ ವೀಕ್ಷಕ ವಿವರಣೆಯನ್ನು ಮಾಡತಕ್ಕುದಲ್ಲ.
(10) ಯಾವುದೇ ಉಪ್ಪರಿಗೆಯ ಮೊಗಸಾಲೆಯನ್ನು (ಗ್ಯಾಲರಿಯನ್ನು) ಒಬ್ಬ ಅಪರಿಚಿತನು ಪ್ರವೇಶಿಸಿದಾಗ ಚಪ್ಪಾಳೆ ಹೊಡೆಯತಕ್ಕುದಲ್ಲ.
325. ಸಭಾಧ್ಯಕ್ಷರಿಂದ ಕರೆಬಂದಾಗ ಸದಸ್ಯರು ಮಾತನಾಡುವುದು : ಒಬ್ಬ ಸದಸ್ಯನು ಮಾತನಾಡಲು ಎದ್ದು ನಿಂತರೆ, ಸಭಾಧ್ಯಕ್ಷರು ಅವರ ಹೆಸರನ್ನು ಕರೆಯತಕ್ಕುದು. ಒಬ್ಬರಿಗಿಂತ ಹೆಚ್ಚು ಸದಸ್ಯರು ಏಕಕಾಲದಲ್ಲಿ ಎದ್ದು ನಿಂತರೆ, ಸಭಾಧ್ಯಕ್ಷರು ಹೆಸರು ಕರೆದಿರುವ ಸದಸ್ಯರಿಗೆ ಮಾತನಾಡಲು ಹಕ್ಕಿರುವುದು.
326. ಸದನವನ್ನು ಉದ್ದೇಶಿಸಿ ಮಾತನಾಡುವ ರೀತಿ : ಸದನದಲ್ಲಿ ಯಾವುದೇ ವಿಷಯದ ಬಗ್ಗೆ ಒಬ್ಬ ಸದಸ್ಯನು ಯಾವುದೇ ಅಭಿ ಪ್ರಾಯವನ್ನು ವ್ಯಕ್ತಗೊಳಿಸಲಿಚ್ಛಿಸಿದರೆ, ತನ್ನ ಸ್ಥಳದಿಂದಲೇ ಎದ್ದುನಿಂತು ಸಭಾಧ್ಯಕ್ಷರನ್ನು ಸಂಬೋಧಿಸಿ ಮಾತನಾಡತಕ್ಕುದು, ಪರಂತು, ಕಾಯಿಲೆ ಅಥವಾ ದುರ್ಬಲತೆಯಿಂದ ನಿಶ್ಯಕ್ತರಾಗಿರುವವರನ್ನು ಕುಳಿತುಕೊಂಡೆ ಮಾತನಾಡಲು ಅನುಮತಿಸಬಹುದು.
327. ಮಾತನಾಡುವಾಗ ಪಾಲಿಸಬೇಕಾದ ನಿಯಮಗಳು : ಸದಸ್ಯರು ಮಾತನಾಡುವಾಗ
(1) ನ್ಯಾಯಾಲಯದಲ್ಲಿ ಇತ್ಯರ್ಥದಲ್ಲಿದ್ದು ತೀರ್ಪು ನೀಡಿರದ ಯಾವುದೇ ಸಂಗತಿಯನ್ನು ಕುರಿತು ಮಾತನಾಡತಕ್ಕುದಲ್ಲ.
(2) ಸದಸ್ಯರೊಬ್ಬರ ಮೇಲೆ ವೈಯಕ್ತಿಕ ದೋಷಾರೋಪಣೆ ಮಾಡತಕ್ಕುದಲ್ಲ.
(3) ಸಂಸತ್ತು ಅಥವಾ ಯಾವುದೇ ರಾಜ್ಯ ವಿಧಾನಮಂಡಲದ ವ್ಯವಹರಣೆಗಳು ಮತ್ತು ನಡವಳಿಕೆಗಳನ್ನು ಕುರಿತು ಹೀನಾಯವಾಗಿ ಮಾತನಾಡತಕ್ಕುದಲ್ಲ.
(4) ಸದನದ ಯಾವುದೇ ತೀರ್ಮಾನವನ್ನು ಕುರಿತು ಅದನ್ನು ರದ್ದುಪಡಿಸಲು ಪ್ರಸ್ತಾವ ಮಂಡಿಸುವಾಗ ಹೊರತು ಇನ್ನಾವುದೇ ಆರೋಪಣೆ ಮಾಡತಕ್ಕುದಲ್ಲ.
(5) ಸರಿಯಾದ ವಾಕ್ಯಗಳಲ್ಲಿ ರಚಿಸಲಾದ ಆಧಾರಸಹಿತ ಪ್ರಸ್ತಾವದ ಮೇಲೆ ಚರ್ಚೆ ನಡೆಸಿದ್ದ ಹೊರತು ಉನ್ನತಾಧಿಕಾರದಲ್ಲಿರುವ ವ್ಯಕ್ತಿಗಳ ನಡವಳಿಕೆ ಕುರಿತು ಆರೋಪಿಸತಕ್ಕುದಲ್ಲ.









