ಮೈಸೂರು : ಫೆ. 2 ರಿಂದ ಬಜೆಟ್ ತಯಾರಿ ಅಧಿಕೃತ ಸಭೆ ಆರಂಭ ಮಾಡುತ್ತೇನೆ. ಈಗಾಗಲೇ ತಯಾರಿ ಪ್ರಕ್ರಿಯೆ ನಡೆದಿದೆ. ಅಧಿಕೃತ ಸಭೆಗಳನ್ನು ಫೆ.2 ರಿಂದ ಶುರು ಮಾಡುತ್ತೇನೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಕ್ತ ವಾತಾವರಣ ಇದೆ. ಹೀಗಾಗಿ ಹೆಚ್ಚಿನ ಬಂಡವಾಳ ಹೂಡಿಕೆ ಆಗುತ್ತಿದೆ. ಡಾಲರ್ಸ್ನ ಸಮಾವೇಶದಲ್ಲೂ ಕೂಡ ಈ ವಿಚಾರದಲ್ಲಿ ಮಹತ್ವದ ಚರ್ಚೆಯಾಗಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯಪಾಲರ ವಿಚಾರವಾಗಿ ಮಾತನಾಡಿದ ಸಿಎಂ, ರಾಜ್ಯಪಾಲರು ರಾಷ್ಟ್ರಪತಿಗಳಿಗೆ ನಡೆದ ಘಟನೆ ಬಗ್ಗೆ ವಿವರಣೆ ಕೊಟ್ಟಿದ್ದಾರೆ, ಕೊಡಲಿ ಬಿಡಿ. ಅವತ್ತು ಏನೇನು ನಡೆಯಿತು ಎಂಬುದನ್ನು ರಾಷ್ಟ್ರಪತಿಗಳಿಗೆ ರಾಜ್ಯಪಾಲರು ವಿವರಿಸಬಹುದು. ನಾವೇನೂ ವಿವರಣೆ ಕೊಡುವುದಿಲ್ಲ. ನಾಳೆ ಗಣರಾಜ್ಯೋತ್ಸವದಲ್ಲೂ ರಾಜ್ಯಪಾಲರು ಭಾಷಣ ಮಾಡಬೇಕಿದೆ. ನಾವು ಬರೆದು ಕೊಟ್ಟ ಭಾಷಣವನ್ನು ರಾಜ್ಯಪಾಲರು ಗಣರಾಜ್ಯೋತ್ಸವದ ಭಾಷಣದಲ್ಲಿ ಓದಬೇಕು ಎಂಬ ನಿಯಮ ಇಲ್ಲ ಎಂದರು.
ಹೆಚ್.ಡಿ. ರೇವಣ್ಣ ಬಂಧಿಸಿದ ಪ್ರಕರಣ ವಿಚಾರವಾಗಿ ಮಾತನಾಡಿ ಪ್ರತಿಕ್ರಿಯಿಸಿದ ಸಿಎಂ, ನಾವು ಯಾವತ್ತೂ ಯಾರ ಪ್ರಕರಣದಲ್ಲಿಯೂ ತಲೆ ಹಾಕುವುದಿಲ್ಲ. ಕಾನೂನಿನ ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ನಮ್ಮದು ಏನೂ ಇಲ್ಲ. ಸುಮ್ಮನೆ ಇವರು ಏನೇನೋ ಸುಳ್ಳು ಹೇಳುತ್ತಾರೆ ಅಷ್ಟೇ. ನಾನೇಕೆ ರೇವಣ್ಣ ಅವರನ್ನು ದ್ವೇಷ ಮಾಡಲಿ. ಅವರು ಅಧಿಕಾರಕ್ಕೆ ಬರಲ್ಲ. ಒಂದು ವೇಳೆ ಬಂದರೆ ಕಾನೂನು ರೀತಿ ನಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದರು.








