ಮಂಡ್ಯ: ಜಿಲ್ಲೆಯ ವಿಶ್ವ ವಿಖ್ಯಾತ ಪ್ರವಾಸಿ ತಾಣವಾದ ಕೊಕ್ಕರೆ ಬೆಳ್ಳೂರು ಕುರಿತ ಲಕೋಟೆಯನ್ನು ಭಾರತೀಯ ಅಂಚೆ ಇಲಾಖೆ ಹೊರತಂದಿದ್ದು, ಈ ಮೂಲಕ ರಾಷ್ಟ್ರಮಟ್ಟದಲ್ಲಿ ಕೊಕ್ಕರೆ ಬೆಳ್ಳೂರು ಗ್ರಾಮವನ್ನು ಪರಿಚಯಸುವ ಪ್ರಯತ್ನ ಮಾಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಬುಧವಾರ ತಿಳಿಸಿದರು.
ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡದ ನವೀಕರಣ ಮತ್ತು ಕೂಸಿನ ಮನೆ ಉದ್ಘಾಟನೆ ಹಾಗೂ ಭಾರತೀಯ ಅಂಚೆ ಇಲಾಖೆ ಮಂಡ್ಯ ವಿಭಾಗದಿಂದ ಕೊಕ್ಕರೆ ಬೆಳ್ಳೂರು ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೊಕ್ಕರೆ ಬೆಳ್ಳೂರು ಹೆಸರಿನ ಅಂಚೆ ಲಕೋಟೆ ವಿಶೇಷವಾಗಿದ್ದು ಇದು ಇಡೀ ದೇಶದಲ್ಲೇ ಉದ್ಘಾಟನೆಯಾಗಿ ಲಕೋಟೆ ಐತಿಹಾಸಿಕ ಸ್ಥಳಗಳು, ಸಾಂಸ್ಕೃತಿಕ ಹಾಗೂ ಪರಂಪರೆಯನ್ನು ಗೌರವಿಸಲು ಅಂಚೆ ಇಲಾಖೆಯು ಆಯಾ ವಿಷಯದ ಮಹತ್ವವನ್ನು ದಾಖಲಿಸುವ ಉದ್ದೇಶದಿಂದ ಬಿಡುಗಡೆ ಮಾಡಿದ್ದು, ಕೊಕ್ಕರೆ ಬೆಳ್ಳೂರು ಗ್ರಾಮದ ಇತಿಹಾಸವು ಮುಂದಿನ ದಿನಗಳಲ್ಲಿ ದೇಶದಾದ್ಯಂತ ಪಸರಿಸುವುದಾಗಿ ಹೇಳಿದರು.
ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ವಿವಿಧ ದೇಶಗಳಿಂದ ಪಕ್ಷಿಗಳು ಗೂಡು ಕಟ್ಟಿಕೊಂಡು ಸಂತಾನೋತ್ಪತ್ತಿ ಮಾಡಲು ಬರುತ್ತವೆ. ಗ್ರಾಮಸ್ಥರಿಗೆ ಹಾಗೂ ವಲಸೆ ಬರುವ ಪಕ್ಷಿಗಳಿಗೂ ಅವಿನಾಭಾವ ಸಂಬಂಧವಿದೆ. ಕೊಕ್ಕರೆ ಬೆಳ್ಳೂರು ಗ್ರಾಮವನ್ನು ಅರಣ್ಯ ಇಲಾಖೆಯ ಸಹಯೋಗದಲ್ಲಿ ಜಾಗ ಇರುವ ಕಡೆ ಸಸಿ ನೆಟ್ಟು ಪೋಷಿಸುವ ಕೆಲಸ ಮಾಡಲಾಗುವುದು. ಪಕ್ಷಿಗಳಿಗೆ ನೀರಿನ ಮೂಲವಾದ ಕೆರೆ ಮತ್ತು ನದಿಗಳ ಅಭಿವೃದ್ಧಿ, ಪ್ರವಾಸೋದ್ಯಮ ಇಲಾಖೆಯಿಂದ ಮಾಹಿತಿ ಕೇಂದ್ರ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಗ್ರಾಮಸ್ಥರ ಸಹಕಾರವು ಮುಖ್ಯವಾಗಿದೆ ಎಂದು ಹೇಳಿದರು.
ಈ ವೇಳೆ ಅಂಚೆ ಇಲಾಖೆ ಅಧೀಕ್ಷಕ ಎಂ.ಡಿ.ಆಕಾಶ್ ಮಾತನಾಡಿ ಇದು ಸಾಮಾನ್ಯ ಅಂಚೆ ಲಕೋಟೆಗಳಿಗಿಂತ ಭಿನ್ನವಾಗಿದ್ದು ಸಂಗ್ರಹಕಾರರಿಗೆ ಹೆಚ್ಚಿನ ಮೌಲ್ಯವನ್ನು ಹೊಂದಿರುವುದಾಗಿ ಹಾಗೂ ಅಂಚೆ ಲಕೋಟೆ ಬಿಡುಗಡೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಧನ ಸಹಾಯ ಮಾಡಿರುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆಂಪರಾಜು ಅವರು ಎಲ್ಲ ಸದಸ್ಯರ ಜೊತೆಗೂಡಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಕೆಲವೇ ದಿನಗಳಲ್ಲಿ ಈ ಭಾಗದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ್, ಗ್ರಾಪಂ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷೆ ಜ್ಯೋತಿ, ಅಂಚೆ ಇಲಾಖೆಯ ಸಹಾಯಕ ಅಂಚೆ ಅಧೀಕ್ಷಕರಾದ ರಾಜು ಕಾಳೇಶ್ವರ್, ಪಿ.ಎಲ್.ನಾಗರಾಜ್, ಅಭಿವೃದ್ಧಿ ಅಧಿಕಾರಿ ಎಚ್.ಎಂ.ನಾಗರಾಜ್, ಕೆಂಪರಾಜು, ಚೈತ್ರ ಶಶಿಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ಗೀತಾ, ಕುಮಾರ್, ಶಶಿರೇಖಾ, ಮಾದೇಶ್, ಸುಂದ್ರಮ್ಮ, ಪಿಡಿಓ ಪ್ರಭಾಕರ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಪೌರಾಯುಕ್ತೆಗೆ ಬೆದರಿಕೆ ಕೇಸ್: ನಾಳೆ ಹೈಕೋರ್ಟ್ ನಿಂದ FIR ರದ್ದು ಕೋರಿ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿಯ ಆದೇಶ ಪ್ರಕಟ
BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ








