ಶಿವಮೊಗ್ಗ : ಸಾಗರದಲ್ಲಿ ಫೆಬ್ರವರಿ 3ರಿಂದ 11ರವರೆಗೆ ನಡೆಯುವ ಇತಿಹಾಸ ಪ್ರಸಿದ್ಧವಾದ ಶ್ರೀ ಮಾರಿಕಾಂಬಾ ಜಾತ್ರೆಯ 9 ದಿನಗಳ ಕಾಲ 25ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಬರುವ ಭಕ್ತರಿಗೆ ಅನಾನುಕೂಲವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಮೂಲಭೂತ ಸೌಕರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳ ಬೇಕಾದುದ್ದು ನಮ್ಮೆಲ್ಲರ ಜವಾಬ್ದಾರಿ ಜಾತ್ರೆಗೆ ಸಂಬಂಧಿಸಿದಂತೆ ಸಕಲ ಸಿದ್ದತೆ ನಡೆದಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಂದು ಶಿವಮೊಗ್ಗದ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದಂತ ಅವರು, ಜಾತ್ರೆ ಹಿನ್ನೆಲೆಯಲ್ಲಿ ಅಡಿಷನಲ್ ಎಸ್ಪಿ, ಮೂವರು ಡಿವೈಎಸ್‌ಪಿ, ಇನ್ಸ್ಪೆಕ್ಟರ್ ಹಾಗೂ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಲು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ ಶಾಸಕರು, ಜಾತ್ರೆ ಯಶಸ್ಸಿಗಾಗಿ ರಚಿಸಿರುವ 20 ಸಮಿತಿಗಳಿಗೂ ಒಬ್ಬೊಬ್ಬ ಅಧಿಕಾರಿಯನ್ನು ಮೇಲುಸ್ತುವಾರಿಯಾಗಿ ನೇಮಕ ಮಾಡಿದ್ದು ಅವರು 9 ದಿನಗಳ ಕಾಲ ರಜೆ ಹಾಕದೆ ಅಮ್ಮನ ಸೇವೆ ಮಾಡಬೇಕು. ಜಾತ್ರೆ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಸೇವೆಗಾಗಿ ನಮ್ಮ ಕ್ಲಿನಿಕ್ ಘಟಕ ಎರಡು ಕಡೆ ಕೆಲಸ ಮಾಡಲಿದ್ದು, ಎರಡು ಅಂಬ್ಯುಲೆನ್ಸ್ ಸೇವೆ ಇರುತ್ತದೆ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಪ್ರತಿದಿನ ನಗರಸಭೆ ವತಿಯಿಂದ ಹೆಚ್ಚುವರಿ ಪೌರ ಕಾರ್ಮಿಕರ ನೇಮಿಸಿಕೊಂಡು ಸ್ವಚ್ಚತಾಕಾರ್ಯ ಕೈಗೊಳ್ಳಲಾಗುತ್ತದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸೇರಿ ಎಲ್ಲ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಇರುತ್ತದೆ ಎಲ್ಲರೂ ಸೇರಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸೋಣ ಎಂದರು.
ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಮಾರಿಕಾಂಬಾ ಜಾತ್ರೆಯನ್ನು ಅಧಿಕಾರಿಗಳು, ಸಾರ್ವಜನಿಕರು, ಸಮಿತಿಯವರು ಒಟ್ಟಾಗಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ಜಾತ್ರೆ ಯಶಸ್ಸಿಗೆ ಆಡಳಿತದ ಅಗತ್ಯ ಸಹಕಾರ ನೀಡಲಾಗುತ್ತದೆ. ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ದೇವಿದರ್ಶನ ಸಂದರ್ಭದಲ್ಲಿ ಯಾವುದೇ ಗೊಂದಲ ಆಗದಂತೆ ಸಮಿತಿಯವರು ಗಮನ ಹರಿಸಬೇಕು. ವಯಸ್ಸಾದವರಿಗೆ, ಅಂಗವಿಕಲರಿಗೆ ದೇವಿ ದರ್ಶನಕ್ಕೆ ವೀಲ್‌ಚೇರ್ ವ್ಯವಸ್ಥೆಯನ್ನು ಸಮಿತಿ ಮಾಡಬೇಕು. ತುರ್ತು ಆರೋಗ್ಯ ಸೇವೆಗಾಗಿ ನಮ್ಮ ಕ್ಲಿನಿಕ್‌ಗೆ ಒತ್ತು ನೀಡಲಾಗುತ್ತದೆ. ಆಗಾಗ ಭೇಟಿ ನೀಡಿ ಜಾತ್ರೆಯ ಮೇಲುಸ್ತುವಾರಿ ವಹಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಮಾತನಾಡಿ, ಜಾತ್ರೆ ಯಶಸ್ಸಿಗೆ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳನ್ನು ಒಳಗೊಂಡಂತೆ ಮೂರನೇ ಸಭೆ ನಡೆಸಲಾಗುತ್ತಿದೆ. ಸೂಕ್ಷö್ಮ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಜೊತೆಗೆ ಎರಡು ಕಡೆ ಸಹಾಯವಾಣಿ ತೆರೆಯಲಾಗುತ್ತದೆ. ಪಿಕ್‌ಪಾಕೇಟ್, ಸರಗಳ್ಳತನ ಸೇರಿ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ವಿಶೇಷ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ರಥ ಸಂಚರಿಸುವ ದಾರಿಯನ್ನು ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇವೆ. ಸಂಚಾರ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆಗಾಗಿ ಅಗತ್ಯ ಗಮನ ಹರಿಸಲಾಗುತ್ತದೆ ಜಾತ್ರೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ರಕ್ಷಣಾ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಈ ವೇಳೆ ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್‌ಪಿ ಡಾ. ಬೆನಕಪ್ರಸಾದ್, ತಹಶೀಲ್ದಾರ್ ರಶ್ಮಿ ಹಾಲೇಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಕಾರ್ಯದರ್ಶಿ ಗಿರಿಧರ ರಾವ್, ಶಾಸಕರ ಕರ್ತವ್ಯಾಧಿಕಾರಿ ಟಿ.ಪಿ ರಮೇಶ್, ಸಾಗರದ ಶ್ರೀ ಮಾರಿಕಾಂಬ ನ್ಯಾಸ ಪ್ರತಿಷ್ಠಾನದ ಸಂಚಾಲಕರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಸೆನ್ಸೆಕ್ಸ್, ನಿಫ್ಟಿ 50 ಪಾಯಿಂಟ್ ಕುಸಿತ; ವ್ಯಾಪಾರ ಯುದ್ಧದ ಭಯದಲ್ಲಿ ಹೂಡಿಕೆದಾರರ 10 ಲಕ್ಷ ಕೋಟಿ ನಷ್ಟ








