ರಾಯಚೂರು : ಮಹಿಳಾ ಅಧಿಕಾರಿಗಳಿಗೆ ಪುಂಡರು ಬೆದರಿಕೆ ಹಾಕಿರುವ ಘಟನೆಗಳು ಇತ್ತೀಚಿಗೆ ನಡೆದಿವೆ. ಆದರೆ ಇದೀಗ ಅಕ್ರಮ ಮರಳು ದಂಧೆಕೋರರು ಅಕ್ರಮ ಮರಳುಗಾರಿಕೆ ತಡೆಯದಂತೆ ನನ್ನ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಅಂತ ರಾಯಚೂರಿನ ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ್ ಆಕ್ರೋಶ ಹೊರಹಾಕಿದ್ದಾರೆ.
ಹೌದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನ ಭೇಟಿಯಾದ ಶಾಸಕಿ ಕರೆಮ್ಮ ಜಿ ನಾಯಕ್ ಅಕ್ರಮ ಮರಳು ದಂಧೆಕೋರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ರಾಯಚೂರು ಎಸ್.ಪಿ ಗೆ ದೂರು ನೀಡಿ ಬಳಿಕ ಮಾತನಾಡಿದ ಕರೆಮ್ಮ ನಾಯಕ್ ದೇವದುರ್ಗ ತಾಲೂಕಿನಲ್ಲಿ ಯಾವುದೇ ಟೆಂಡರ್ ಇಲ್ಲದೇ ಲಾರಿಗಳಲ್ಲಿ ಅಕ್ರಮ ಮರಳು ಸಾಗಣೆ ನಡೆದಿದೆ. ನಾನು ಟ್ರ್ಯಾಕ್ಟರ್‌ನಲ್ಲಿ ಸಾಗಿಸುವವರ ಪರ ಇದ್ದೇನೆ, ಲಾರಿಯವರು ಟ್ರ್ಯಾಕ್ಟರ್‌ನವರನ್ನ ಎತ್ತಿಕಟ್ಟುತ್ತಿದ್ದಾರೆ ಎಂದರು.
ಲಾರಿ ಇಟ್ಟು ಮರಳುಗಾರಿಕೆ ಮಾಡುವ ಶ್ರೀನಿವಾಸ ನಾಯಕ್ ಇತರರು ಬೆದರಿಸಲು ಬಂದಿದ್ದರು. ಪೊಲೀಸ್ ಕ್ವಾಟ್ರಸ್‌ನಲ್ಲಿರೋ ನನ್ನ ಮನೆಗೆ ಬಂದು ಬೆದರಿಸುತ್ತಾರೆ. ಕಾನೂನು ಸುವ್ಯವಸ್ಥೆ ಎಲ್ಲಿದೆ? ಸರ್ಕಾರ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ. ಅಧಿಕಾರಿಗಳಿಗೆ ಇವರನ್ನ ಹೆದರಿಸುವ ಧೈರ್ಯ ಇಲ್ಲದಂತಾಗಿದೆ, ತಹಶಿಲ್ದಾರರನ್ನೂ ಹೆದರಿಸುತ್ತಾರೆ. ಶಾಸಕರಾಗಿ ನಾನು ಕೆಲಸ ಮಾಡುವುದು ಹೇಗೆ ಸರ್ಕಾರ ಇದನ್ನ ಗಮನಿಸಬೇಕು. ಸಿಎಂ, ಗೃಹ ಸಚಿವರು ಸಹ ಇದರಕಡೆ ಗಮನ ಹರಿಸಬೇಕು ಅಂತ ಒತ್ತಾಯಿಸಿದ್ದಾರೆ.








