ಬೆಂಗಳೂರು: ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (ಬಿಎಮ್‌ಎ) ಶನಿವಾರ (ಜನವರಿ 17) “ಎಐ ಮತ್ತು ನಿರ್ವಹಣಾ ಶಿಕ್ಷಣದ ಭವಿಷ್ಯ” ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿತು. ನಿರ್ದೇಶಕರು, ಡೀನ್ಸ್, ವಿಭಾಗ ಮುಖ್ಯಸ್ಥರು ಹಾಗೂ ನಿರ್ವಹಣಾ ಶಿಕ್ಷಣ ಸಂಸ್ಥೆಗಳ ಹಿರಿಯ ಪ್ರಾಧ್ಯಾಪಕರು ಸೇರಿದಂತೆ ಸುಮಾರು 120 ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
ಬಿಎಮ್‌ಎ ಅಧ್ಯಕ್ಷರಾದ ಪಂಕಜ್ ಕುಮಾರ್ ಪಾಂಡೆ, ಐಎಎಸ್, ಅವರ ಮಾರ್ಗದರ್ಶನದ ಮೂಲಕ ಬಿಎಮ್‌ಎ ಹಿರಿಯ ಉಪಾಧ್ಯಕ್ಷರಾದ ಡಾ. ಶಿವಶಂಕರ ಎನ್., ಐಎಎಸ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು. ವೇಗವಾಗಿ ಬದಲಾಗುತ್ತಿರುವ ಉದ್ಯಮ ಅಗತ್ಯತೆಗಳ ಹಿನ್ನೆಲೆಯಲ್ಲಿ ನಿರ್ವಹಣಾ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಉಂಟುಮಾಡುತ್ತಿರುವ ಸವಾಲುಗಳು ಮತ್ತು ಅವಕಾಶಗಳ ಕುರಿತು ಶಿಕ್ಷಣ ತಜ್ಞರು ಹಾಗೂ ಕೈಗಾರಿಕಾ ವಲಯದ ಪ್ರಮುಖರು ಚರ್ಚಿಸಲು ವಿಚಾರ ಸಂಕಿರಣ ವೇದಿಕೆಯಾಗಿತ್ತು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಉಪ ಕುಲಪತಿಗಳಾದ ಪ್ರೊ. ವಿದ್ಯಾಶಂಕರ ಎಸ್. ಅವರು ಮಾತನಾಡಿ, ವಿಶ್ವವಿದ್ಯಾಲಯಗಳು ಉದಯೋನ್ಮುಖ ಎಐ ಅಗತ್ಯತೆಗಳನ್ನು ಹೇಗೆ ಎದುರಿಸುತ್ತಿವೆ ಎಂಬುದನ್ನು ವಿಸ್ತೃತವಾಗಿ ವಿವರಿಸಿದರು. ಶಿಕ್ಷಣ ಸಂಸ್ಥೆಗಳು ವೇಗವಾಗಿ ಬದಲಾಗುತ್ತಿರುವ ಎಐ ಅಗತ್ಯೆತೆಗಳಿಗೆ ಒಗ್ಗಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಸೈವೇರ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅಶ್ವಿನ್ ಹೆಗಡೆ ಕಾರ್ಕಳ ಅವರು, ಜಾಗತಿಕ ಮಟ್ಟದಲ್ಲಿ ವೇಗವಾಗಿ ಬದಲಾಗುತ್ತಿರುವ ಕೌಶಲ್ಯ ಅಗತ್ಯತೆಗಳು ಹಾಗೂ ಅದಕ್ಕೆ ಅನುಗುಣವಾಗಿ ಮಾನವ ಸಂಪನ್ಮೂಲ ಮತ್ತು ಪ್ರತಿಭಾ ಅಗತ್ಯತೆಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವಿವರಿಸಿದರು.
ಬಿಎಂಎ ಹಿರಿಯ ಉಪಾಧ್ಯಕ್ಷ ಡಾ. ಶಿವಶಂಕರ ಎನ್. ಮಾತಾನಡಿ, ಬಿಎಮ್‌ಎಯ ದೃಷ್ಟಿಕೋನ ಹಾಗೂ ಕೈಗಾರಿಕೆಗಳು, ಎಂಎಸ್‌ಎಂಇಗಳು, ಸ್ಟಾರ್ಟ್‌ಅಪ್ಸ್, ಸೇವಾ ಕ್ಷೇತ್ರಗಳು ಮತ್ತು ಸರ್ಕಾರಿ ಸಂಸ್ಥೆಗಳಾದ್ಯಂತ ಪರಿಣಾಮಕಾರಿ ನಿರ್ವಹಣಾ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಬಿಎಮ್‌ಎ ವಹಿಸುತ್ತಿರುವ ಮಹತ್ವದ ಪಾತ್ರವನ್ನು ವಿವರಿಸಿದರು. ಇದರಲ್ಲಿ ಅಕಾಡೆಮಿಕ್ ವಲಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ನಿರ್ವಹಣಾ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಉದ್ಯೋಗಾರ್ಹತೆಯನ್ನು ಸುಧಾರಿಸಲು ಬಿಎಮ್‌ಎಯ ಉಪಕ್ರಮಗಳಲ್ಲಿ ಸಕ್ರಿಯ ಪಾಲುದಾರರಾಗಬೇಕೆಂದು ಡಾ. ಶಿವಶಂಕರ ಅವರು ಒತ್ತಿ ಹೇಳಿದರು.
ಪ್ಯಾನಲ್ ಚರ್ಚೆಯಲ್ಲಿ ಬಯೋಕಾನ್ ಬಯಾಲಜಿಕ್ಸ್‌ನ ಎವಿಪಿ–ಗ್ಲೋಬಲ್ ಹೆಡ್ ಚೆಲ್ಲ ಪಾಂಡಿಯನ್ ಪಿಚ್ಚೈ, ರೋಬೋಸಾಫ್ಟ್‌ನ ಟ್ಯಾಲೆಂಟ್ ಅಕ್ವಿಜಿಷನ್ ಮುಖ್ಯಸ್ಥ ನದೀಮ್ ಪಾಷಾ, ಎನ್‌ಎಚ್‌ಆರ್‌ಡಿ ಕಾರ್ಯದರ್ಶಿ ಡಾ. ಎಸ್.ಜೆ. ನಾಗನ ಗೌಡ, ಕ್ವಾಂಟೆಕ್ ಸಂಸ್ಥೆಯ ಮುಖ್ಯಸ್ಥ ಅನಂತ್ ಮಲ್ಯ ಮತ್ತು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿವೃತ್ತ ನಿರ್ದೇಶಕರಾದ ಡಾ. ಎನ್. ಮೋಹನ್ ದಾಸ್ ಅವರು ಭಾಗವಹಿಸಿ, ಎಐ ಸಾಕ್ಷರತೆ, ವಿಶ್ಲೇಷಣಾತ್ಮಕ ಚಿಂತನೆ, ಹೊಂದಿಕೊಳ್ಳುವಿಕೆ, ನೈತಿಕತೆ ಹಾಗೂ ಶೈಕ್ಷಣಿಕ ವಲಯ ಮತ್ತು ಉದ್ಯಮದ ನಡುವಿನ ನಿಕಟ ಸಹಕಾರದ ಮಹತ್ವವನ್ನು ಒತ್ತಿ ಹೇಳಿದರು.
ಎನ್. ಡಿ. ವೀರಣ್ಣ ಗೌಡ, ನಿರ್ದೇಶಕರು ನಿರ್ವಹಣಾ ಅಭಿವೃದ್ಧಿ ಕೇಂದ್ರ, ಬಿಎಮ್‌ಎ ಮಾತನಾಡಿ, ಸಂಯುಕ್ತ ಸಮಿತಿಗಳ ರಚನೆ, ಪಠ್ಯಕ್ರಮ ಪುನರ್ ವಿನ್ಯಾಸ, ಅಧ್ಯಾಪಕರ ಕೌಶಲ್ಯಾಭಿವೃದ್ಧಿ, ವಿದ್ಯಾರ್ಥಿ ಯೋಜನೆಗಳು, ಇಂಟರ್ನ್‌ಶಿಪ್‌ಗಳು ಹಾಗೂ ಉದ್ಯೋಗವಕಾಶಕ್ಕೆ ಬೆಂಬಲ ಸೇರಿದಂತೆ ವಿಚಾರ ಸಂಕಿರಣದಲ್ಲಿ ವ್ಯಕ್ತವಾದ ಪ್ರಮುಖ ಶಿಫಾರಸುಗಳು ಮತ್ತು ಕ್ರಿಯಾಯೋಜನೆಗಳನ್ನು ವಿವರಿಸಿದರು. ಇದರಲ್ಲಿ ಬಿಎಮ್‌ಎ ಸಹಾಯಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಈ ವಿಚಾರ ಸಂಕಿರಣವು ಇಂತಹ ಪ್ರಗತಿಪರ ಪ್ರಯತ್ನಗಳಲ್ಲಿ ಬಿಎಮ್‌ಎ ಮುಂದಾಳತ್ವ ಹಾಗೂ ತಟಸ್ಥ ಸಹಾಯಕ ಸಂಸ್ಥೆಯಾಗಿ ತನ್ನ ಪಾತ್ರವನ್ನು ಮತ್ತೊಮ್ಮೆ ನಿರೂಪಿಸಿತು.
-ಎನ್. ಡಿ. ವೀರಣ್ಣ ಗೌಡ, ನಿರ್ದೇಶಕರು ನಿರ್ವಹಣಾ ಅಭಿವೃದ್ಧಿ ಕೇಂದ್ರ, ಬಿಎಮ್‌ಎ








