ಬೆಂಗಳೂರು : ರಾಜ್ಯದಲ್ಲಿ 2025-26ನೇ ಸಾಲಿನ ಪ್ರಥಮ ಪಿಯುಸಿ ತರಗತಿಗಳ ವಾರ್ಷಿಕ ಪರೀಕ್ಷೆಯನ್ನು ಫೆಬ್ರವರಿ 10ರಿಂದ ಫೆ.25ಗೊಳಗೆ ನಡೆಸುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಶಿಕ್ಷಣ ಇಲಾಖೆ ಆದೇಶದಲ್ಲಿ ಏನಿದೆ?
ಮೇಲ್ಕಂಡ ವಿಷಯ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯು ವಾರ್ಷಿಕ ಪರೀಕ್ಷೆಯನ್ನು ನಡೆಸುವ ಸಂಬಂಧ ಇಲಾಖೆ ಹೊರಡಿಸಿರುವ ದಾಖಲಾತಿ ಮಾರ್ಗಸೂಚಿ ಅನ್ವಯ ದಿನಾಂಕ 10-02-2026 ರಿಂದ 25-02-2026 ರವರೆಗಿನ ದಿನಗಳಲ್ಲಿ ಪ್ರತಿ ಕಾಲೇಜಿಗೆ ಅನ್ವಯವಾಗುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಕೊಳ್ಳುವುದು. ಯಾವುದೇ ಕಾರಣಕ್ಕೂ ಪರೀಕ್ಷೆ ಸಂಬಂಧ ಹಣ ಸಂಗ್ರಹಿಸದಂತೆ ಹಾಗೂ ಎಲ್ಲಾ ಪರೀಕ್ಷಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಪರೀಕ್ಷೆಯನ್ನು ನಡೆಸಲು ತಿಳಿಸಿದೆ.
ಈ ಸಂಬಂಧ ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಳವಡಿಸಿರುವ ದ್ವಿತೀಯ ಪಿಯುಸಿ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅನುಸರಿಸಿ, ಅದೇ ಮಾದರಿಯಲ್ಲಿ ಪ್ರಥಮ ಪಿಯುಸಿ ತರಗತಿಗೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಯಾವುದೇ ನ್ಯೂನ್ಯತೆಗಳಿಲ್ಲದೆ ಹಾಗೂ ದೂರುಗಳಿಗೆ ಆಸ್ಪದವಿಲ್ಲದಂತೆ ಪರೀಕ್ಷಾ ಕಾರ್ಯ ನಡೆಸಲು ಸೂಚಿಸಿದೆ.
ದಿನಾಂಕ:25-02-2026 ರೊಳಗಾಗಿ ಎಲ್ಲಾ ಪರೀಕ್ಷಾ ಕಾರ್ಯಗಳನ್ನು ಪೂರ್ಣಗೊಳಿಸಿ ಮೌಲ್ಯಮಾಪನದ ನಂತರ ಅಂಕಗಳನ್ನು SATS ತಂತ್ರಾಂಶದಲ್ಲಿ ಇಂದೀಕರಿಸಿ, ಸದರಿ ಫಲಿತಾಂಶ ಪಟ್ಟಿಯನ್ನು ಡೌನ್ಫೋಡ್ ಮಾಡಿಕೊಳ್ಳುವುದು. ದಿನಾಂಕ:13-03-2026 ರೊಳಗೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಂದ ಫಲಿತಾಂಶ ಪಟ್ಟಿಗೆ ಅನುಮೋದನೆಯನ್ನು ಪಡೆದು ದಿನಾಂಕ: 30-03-2026 ರಂದು ಪ್ರಥಮ ಪಿಯುಸಿ ಫಲಿತಾಂಶವನ್ನು ಘೋಷಣೆ ಮಾಡುವುದು. ಈ ಸಂಬಂಧ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಲು ಸೂಚಿಸಿದೆ.









