ಬೀದರ್ : ಕಳೆದ ಕೆಲವು ದಿನಗಳ ಹಿಂದೆ ತಾನೆ ಗಾಳಿಪಟ ಹಾರಿಸುವಾಗ ಗಾಳಿಪಟದ ಮಾಂಜಾ (ಗಾಜು ಲೇಪಿತ ದಾರ) ಕುತ್ತಿಗೆಗೆ ಸಿಲುಕಿ ಬೈಕ್ ಸವಾರರೊಬ್ಬರು ಸಾವನ್ನಪ್ಪಿರುವ ಘಟನೆ ಬೀದರ್ ನಲ್ಲಿ ನಡೆದಿತ್ತು. ಇದೀಗ ಬೀದರ್ ನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಗಾಳಿಪಟ ಹಾರಿಸುವಾಗ ಕಟ್ಟಡದ ಮೇಲಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ.
ಹೌದು ಗೆಳೆಯರೊಂದಿಗೆ ಗಾಳಿಪಟ ಹಾರಿಸಲು ಕಟ್ಟಡದ ಮೇಲೇರಿದ್ದ ಯುವಕ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಹುಮನಾಬಾದ್ನ ವಾಂಜರಿ ಬಡಾವಣೆಯಲ್ಲಿ ನಡೆದಿದೆ. ವಾಂಜರಿ ಬಡಾವಣೆಯ ನಿವಾಸಿ ಶಶಿಕುಮಾರ ಶಿವಾನಂದ ಡೊಂಗರಗಾಂವ (19) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ.
ಬಡಾವಣೆಯ ಎಸ್.ಎಚ್.ಪಾಟೀಲ್ ಐಟಿಐ ಕಾಲೇಜ್ ಪಕ್ಕದ ಕಟ್ಟಡದ ಶೆಡ್ ಮೇಲೆ ಹತ್ತಿದ್ದರು. ಶಿವಾನಂದ ಗಾಳಿಪಟ ಹಿಡಿಯಲು ಯತ್ನಿಸುತ್ತಿದಾಗ ಆಯತಪ್ಪಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ತಾಯಿ ನೀಡಿದ ದೂರಿನ ಮೇರೆಗೆ ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.








