ಬೆಂಗಳೂರು : ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಟೆಕ್ನಾಲಜಿ (IWST) ಪರೀಕ್ಷೆಯಲ್ಲಿ ಇದೀಗ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಈ ಒಂದು ಪರೀಕ್ಷೆ ನಡೆಸಿದ್ದು, ಬೇರೆ ವ್ಯಕ್ತಿಗಳಿಂದ ಆರೋಪಿಗಳು ಪರೀಕ್ಷೆ ಬರೆದಿದ್ದಾರೆ ಎಂದು ತನಿಖೆ ವೇಳೆ ಬಯಲಾಗಿದೆ.
ಈ ಕುರಿತು ಆಂತರಿಕ ತನಿಖೆ ನಡೆಸಿದ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಮಂಡಳಿ ಪರೀಕ್ಷೆಗೆ ಹಾಜರಾದ ವ್ಯಕ್ತಿಗಳ ಫೋಟೋ ಮತ್ತು ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದು, ನೇಮಕಾತಿ ವೇಳೆ ಅರ್ಹ ವ್ಯಕ್ತಿಗಳು ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿತ್ತು. ಕೆಲಸಕ್ಕೆ ಸೇರಿದ ವೇಳೆ ಸಲ್ಲಿಸಿದ ದಾಖಲೆಗಳನ್ನು ಸಂಸ್ಥೆ ಪರಿಶೀಲನೆ ಮಾಡಿದ್ದು ಎಲ್ಲಾ ದಾಖಲೆಗಳ ಸಹಿಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಫೋಟೋ ಮತ್ತು ಸಿಸಿಟಿವಿ ಹಾಗೂ ವಿಡಿಯೋ ಗ್ರಾಫಿ ಪರಿಶೀಲನೆ ನಡೆಸುತ್ತಿದ್ದು, ಎಲ್ಲಾ ದಾಖಲೆಗಳನ್ನು ಮಂಡಳಿ FSL ಗೆ ಕಳುಹಿಸಿದೆ. FSL ವರದಿಯಲ್ಲಿ ಬೇರೆ ಬೇರೆ ವ್ಯಕ್ತಿಗಳು ಪರೀಕ್ಷೆ ಬರೆದಿರುವುದು ದೃಢವಾಗಿದೆ. ಈ ಹಿನ್ನೆಲೆ ಮಂಡಳಿಯ ಕಾರ್ಯದರ್ಶಿ ದೂರು ನೀಡಿದ್ದು ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಮಂಡಳಿಯ ಕಾರ್ಯದರ್ಶಿ, ದೂರಿನ ಅನ್ವಯ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ 7 ಅಭ್ಯರ್ಥಿಗಳ ವಿರುದ್ಧ FIR ದಾಖಲಾಗಿದೆ.
ಮತ್ತೊಬ್ಬರ ಕೈಯಲ್ಲಿ ಪರೀಕ್ಷೆ ಬರೆಸಿದವರು ಇದೀಗ ಸರ್ಕಾರ ಕೆಲಸ ಗಿಟ್ಟಿಸಿಕೊಂಡಿದ್ದಾರೆ. 2018 ಮತ್ತು 2022 ರಲ್ಲಿ MTS ಹುದ್ದೆಗೆ ಪರೀಕ್ಷೆ ನಡೆದಿತ್ತು. ವುಡ್ ಸೈನ್ಸ್ ಟೆಕ್ನಾಲಜಿ ಅಭ್ಯರ್ಥಿಗಳಿಗೆ ಈ ಒಂದು ಪರೀಕ್ಷೆ ನಡೆದಿದ್ದು, ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಪರೀಕ್ಷೆ ನಡೆಸಿತ್ತು. ಆಗ 7 ಅಭ್ಯರ್ಥಿಗಳು ಬೇರೆಯವರ ಕೈಯಲ್ಲಿ ಪರೀಕ್ಷೆ ಬರೆಸಿದ್ದಾರೆ ಎಂದು ದೃಢಪಟ್ಟಿದೆ.








