ಬೆಂಗಳೂರು: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಆಕ್ಟಿವಿಟಿ ಪಾಯಿಂಟ್ ಅನ್ನು ಆನ್ ಲೈನ್ ನಲ್ಲಿ ನಿರ್ವಹಣೆ ಮಾಡುವುದಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಎಐಸಿಟಿಇ ಆಕ್ಟಿವಿಟಿ ಪಾಯಿಂಟ್ಸ್ ಟ್ರಾಕಿಂಗ್ ಸಿಸ್ಟಂ”(ಎಪಿಟಿಎಸ್) ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಸರ್.ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜಿಸಿದ್ದ ಮೊಬೈಲ್ ಆ್ಯಪ್ ಕಾರ್ಯಾಗಾರದಲ್ಲಿ ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಕುಲಪತಿ ಡಾ.ಎಸ್.ವಿದ್ಯಾಶಂಕರ್, “ಆಕ್ಟಿವಿಟಿ ಪಾಯಿಂಟ್ ಗಾಗಿ ಸುಳ್ಳು ಪ್ರಮಾಣ ಪತ್ರಗಳನ್ನು ನೀಡುವುದನ್ನು ಬಿಟ್ಟುಬಿಡಿ. ಇನ್ಮುಂದೆ ಇದು ನಡೆಯುವುದಿಲ್ಲ. ಎಲ್ಲವೂ ಮೊಬೈಲ್ ಆ್ಯಪ್ ಮೂಲಕ ಟ್ರ್ಯಾಕ್ ಆಗಲಿದೆ. ಕೇವಲ ಕಾಟಾಚಾರಕ್ಕಾಗಿ ಚಟುವಟಿಕೆಯಲ್ಲಿ ಭಾಗವಹಿಸುವುದು ಬಿಟ್ಟು ಬಿಡಿ. ಯಾವುದೋ ಎನ್ ಜಿಒಗಳ ಮೂಲಕ ಪ್ರಮಾಣ ಪತ್ರಗಳನ್ನು ತರುವುದು ಬಿಡಿ. ಈ ಆ್ಯಪ್ ಮೂಲಕ ರಿಯಲ್ ಟೈಮ್ ಡೇಟಾ ನಮಗೆ ಸಿಗಲಿದೆ” ಎಂದರು.
“ವಿದ್ಯಾರ್ಥಿಗಳು ಜೀವನದಲ್ಲಿ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಕೂಡ ಬಹಳ ಮುಖ್ಯ. ಎಐಸಿಟಿಇ ಇದಕ್ಕಾಗಿ 16 ಆಕ್ಟಿವಿಟಿಯನ್ನು ಗುರುತಿಸಿದೆ. ನೀವು ಎಲ್ಲರೂ ಅದರಲ್ಲಿ ಭಾಗವಹಿಸಿ. ಕಾಲೇಜಿನ ಸಂಯೋಜಕರು ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ” ಎಂದರು.
ವಿಟಿಯು ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಡಾ.ಎಚ್.ಆರ್.ಸುದರ್ಶನ ರೆಡ್ಡಿ ಮಾತನಾಡಿ, “ಎಂಜಿನಿಯರಿಂಗ್ ವಿದ್ಯಾರ್ಥಿಗಳು ಓದುವ ವೇಳೆ ಸೇವಾ ಮನೋಭಾವನ್ನು ರೂಪಿಸಬೇಕೆಂಬ ಉತ್ತಮ ಕಲ್ಪನೆಯಿಂದ ಎಐಸಿಟಿಇ ಈ ಆಕ್ಟಿವಿಟಿ ಪಾಯಿಂಟ್ಸ್ ತಂದಿದೆ. ಇದನ್ನು ನಿರ್ವಹಣೆ ಮಾಡಲು ನಾವು ಮೊಬೈಲ್ ಆಪ್ ರೂಪಿಸಿದ್ದು, ಇದು ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ.” ಎಂದರು.
ಆಪ್ ಕಾರ್ಯವೇನು?:
ಯೂತ್ ಫಾರ್ ಸೇವಾ, ಲೈಫ್ ಸೈಕುಲ್ ಸ್ಪೋಟ್ಸ್ ಪೈ.ಲಿ. ಎಂಬ ಕಂಪನಿಯ ಸಹಯೋಗದೊಂದಿಗೆ ಈ ಎಪಿಟಿಎಸ್ ಆಪ್ ರೂಪಿಸಿದೆ. ಈ ಆ್ಯಪ್ ನಲ್ಲಿ ವಿದ್ಯಾರ್ಥಿಗಳು ತಾವು ಚಟುವಟಿಕೆಗಳಲ್ಲಿ ಭಾಗವಹಿಸಿದ ಸಂಪೂರ್ಣ ಮಾಹಿತಿಯನ್ನು ನಮೂದಿಸಬೇಕು. ಇದರಿಂದ ವಿದ್ಯಾರ್ಥಿಗಳು ಎಷ್ಟು ಗಂಟೆಗಳ ಕಾಲ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ ಎಂಬ ಮಾಹಿತಿಯು ತಿಳಿಯಲಿದೆ. ಈ ಆಕ್ಟಿವಿಟಿ ಪಾಯಿಂಟ್ ಇಲ್ಲದೆ, ವಿದ್ಯಾರ್ಥಿಗಳಿಗೆ ಅಂತಿಮ ಅಂಕಪಟ್ಟಿಯನ್ನು ವಿಟಿಯು ನೀಡುವುದಿಲ್ಲ.
ಈ ಕಾರ್ಯಕ್ರಮದಲ್ಲಿ ಯೂತ್ ಫಾರ್ ಸೇವಾ ಸಂಘಟನೆಯ ರಾಷ್ಟ್ರೀಯ ಸಮನ್ವಯ ಅಧಿಕಾರಿ ಅಶ್ವಿನಿ ಕುಮಾರ್, ವಿಟಿಯು ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಡಾ.ಎಚ್.ಆರ್.ಸುದರ್ಶನ ರೆಡ್ಡಿ, ಎಐಸಿಟಿಇ ಆಕ್ಟಿವಿಟಿ ಪಾಯಿಂಟ್ಸ್ ನ ಸಂಯೋಜಕಿ ಮೀರಾ ರಾಜಗೋಪಾಲ್, ಲೈಫ್‌ಸೈಕುಲ್ ಸ್ಪೋಟ್ಸ್ ಪೈ.ಲಿ. ಚೀಫ್ ಬ್ಯುಸಿನೆಸ್ ಆಫೀಸರ್ ಅರವಿಂದ್ ಜಿನೋರ್, ಸರ್ ಎಂವಿಐಟಿಯ ಅಕಾಡೆಮಿಕ್ ಸಮಿತಿಯ ಅಧ್ಯಕ್ಷ ಕೆ.ವಿ. ಶೇಖರ್ ರಾಜು, ಶ್ರೀ ಕೆ ಐ ಟಿ ಟ್ರಸ್ಟ್ ಕಾರ್ಯದರ್ಶಿ ಕೆ.ಆರ್.ಸಂಜಯ್, ಪ್ರಾಂಶುಪಾಲರಾದ ಡಾ.ಎಂ.ಎನ್.ತಿಪ್ಪೇಸ್ವಾಮಿ ಭಾಗವಹಿಸಿದ್ದರು.
SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!
‘ಅರಮನೆ ಆಶ್ರಯ ಸೇವಾ ಫೌಂಡೇಶನ್’ನಿಂದ ಸಾಮಾಜಿಕ ಸೇವೆಗೈದ ಸಾಗರದ ‘ವಿಜಯೇಂದ್ರ ಶಾನಭಾಗ್’ಗೆ ಸನ್ಮಾನ








