ಬೆಂಗಳೂರು : ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಜಟಾಪಟಿ ನಡೆದಿದ್ದು, ಇದರ ಮಧ್ಯ ದಲಿತ ಸಿಎಂ ಕೂಡ ಕೇಳಿ ಬರುತ್ತಿದೆ. ಈ ವಿಚಾರವಾಗಿ ಆಹಾರ ಸಚಿವ ಕೆಎಚ್ ಮುನಿಯಪ್ಪ ಮಾತನಾಡಿದ್ದು, ದಲಿತರೊಬ್ಬರು ಸಿಎಂ ಆಗದಿರುವ ಬಗ್ಗೆ ನಮಗೆ ನೋವಿದೆ. ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ ಎಂದಿದ್ದಾರೆ.
ಬೆಂಗಳೂರಲ್ಲಿ ದಲಿತ ಸಿಎಂ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ಕಾಲದಲ್ಲೇ ಆಗಬೇಕು ಎಂದು ಇತ್ತು. ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲ ಆಗುತ್ತದೆ. ಹೈಕಮಾಂಡ್ಗೆ ಯಾವ ಕಾಲದಲ್ಲಿ ಏನು ಆಗಬೇಕು ಅಂತ ಗೊತ್ತಿದೆ. ಮಾಡುವ ಸ್ಥಾನದಲ್ಲಿ ಖರ್ಗೆಯವರು ಕೂತಿದ್ದಾರೆ. ನಾವು ಇನ್ನೇನು ಮಾತನಾಡೋದು ಎಂದರು.
ನಮಗೆ ಇದೊಂದು ನೋವಿದೆ. ಶೇ25ರಷ್ಟು ಇರುವ ಸಮುದಾಯ ಶೇ75ರಷ್ಟು ಮತಗಳನ್ನು ಕಾಂಗ್ರೆಸ್ಗೆ ಹಾಕುತ್ತಾರೆ. ಇದೆಲ್ಲವನ್ನೂ ಹೈಕಮಾಂಡ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. 2028ಕ್ಕೆ ಮತ್ತೆ ಅಧಿಕಾರಕ್ಕೆ ಬರೋದು ನಮ್ಮ ದೃಷ್ಟಿಕೋನ ಎಂದು ಪರೋಕ್ಷವಾಗಿ ದಲಿತ ಸಿಎಂ ಪರ ಬ್ಯಾಟ್ ಬೀಸಿದರು.








