ವೈದ್ಯರ ಆರೈಕೆಯ ಅಗತ್ಯವಿರುವ ಗಗನಯಾತ್ರಿಯೊಬ್ಬರು ನಾಸಾದ ಮೊದಲ ವೈದ್ಯಕೀಯ ಸ್ಥಳಾಂತರದಲ್ಲಿ ಬುಧವಾರ ಮೂವರು ಸಿಬ್ಬಂದಿಯೊಂದಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟರು.
ಅಮೆರಿಕ, ರಷ್ಯಾ ಮತ್ತು ಜಪಾನ್‌ನ ನಾಲ್ವರು ಗಗನಯಾತ್ರಿಗಳು ಗುರುವಾರ ಮುಂಜಾನೆ ಸ್ಯಾನ್ ಡಿಯಾಗೋ ಸಮೀಪದ ಪೆಸಿಫಿಕ್ ಸಾಗರದಲ್ಲಿ ಸ್ಪೇಸ್ ಎಕ್ಸ್ (SpaceX) ನೌಕೆಯ ಮೂಲಕ ಇಳಿಯಲಿದ್ದಾರೆ. ಈ ತುರ್ತು ನಿರ್ಧಾರದಿಂದಾಗಿ ಅವರ ಬಾಹ್ಯಾಕಾಶ ಅಭಿಯಾನವು ಒಂದು ತಿಂಗಳಿಗಿಂತ ಮುಂಚಿತವಾಗಿಯೇ ಅಂತ್ಯಗೊಂಡಿದೆ.
“ನಮ್ಮ ಈ ವಾಪಸಾತಿಯ ಸಮಯ ಅನಿರೀಕ್ಷಿತ,” ಎಂದು ನಾಸಾ ಗಗನಯಾತ್ರಿ ಝೆನಾ ಕಾರ್ಡ್‌ಮನ್ ಪ್ರಯಾಣಕ್ಕೂ ಮುನ್ನ ಹೇಳಿದ್ದಾರೆ. “ಆದರೆ, ಒಬ್ಬರಿಗೊಬ್ಬರು ಸಹಾಯ ಮಾಡಲು ಮತ್ತು ಕಾಳಜಿ ವಹಿಸಲು ಈ ತಂಡವು ಒಂದು ಕುಟುಂಬದಂತೆ ಹೇಗೆ ಒಂದಾಯಿತು ಎಂಬುದು ನನಗೆ ಆಶ್ಚರ್ಯ ತಂದಿಲ್ಲ.” ಎಂದರು.
ಕಳೆದ ವಾರ ಚಿಕಿತ್ಸೆಯ ಅಗತ್ಯವಿದ್ದ ಗಗನಯಾತ್ರಿ ಯಾರು ಎಂಬುದನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ ಮತ್ತು ಅವರ ಆರೋಗ್ಯದ ಸಮಸ್ಯೆಯ ಬಗ್ಗೆಯೂ ಮಾಹಿತಿ ನೀಡಿಲ್ಲ. ಅಸ್ವಸ್ಥ ಗಗನಯಾತ್ರಿ “ಸ್ಥಿರವಾಗಿದ್ದಾರೆ, ಸುರಕ್ಷಿತವಾಗಿದ್ದಾರೆ ಮತ್ತು ಉತ್ತಮ ಆರೈಕೆಯಲ್ಲಿದ್ದಾರೆ,” ಎಂದು ಬಾಹ್ಯಾಕಾಶ ನಿಲ್ದಾಣದ ನಿರ್ಗಮಿತ ಕಮಾಂಡರ್ ಮೈಕ್ ಫಿಂಕೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. “ಭೂಮಿಯ ಮೇಲೆ ಲಭ್ಯವಿರುವ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮತ್ತು ರೋಗನಿರ್ಣಯ ಸೌಲಭ್ಯಗಳನ್ನು ಬಳಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ,” ಎಂದು ಅವರು ವಿವರಿಸಿದ್ದಾರೆ.
ಆಗಸ್ಟ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಕಾರ್ಡ್‌ಮನ್, ಫಿಂಕೆ, ಜಪಾನ್‌ನ ಕಿಮಿಯಾ ಯುಯಿ ಮತ್ತು ರಷ್ಯಾದ ಒಲೆಗ್ ಪ್ಲಾಟೋನೊವ್ ಅವರು ಫೆಬ್ರವರಿ ಅಂತ್ಯದವರೆಗೆ ಅಲ್ಲಿ ಇರಬೇಕಿತ್ತು. ಆದರೆ ಜನವರಿ 7 ರಂದು ನಾಸಾ ಹಠಾತ್ತನೆ ಸ್ಪೇಸ್‌ವಾಕ್ ರದ್ದುಗೊಳಿಸಿ, ನಂತರ ತಂಡದ ಮುಂಚಿತ ವಾಪಸಾತಿಯನ್ನು ಘೋಷಿಸಿತು. ಈ ಆರೋಗ್ಯ ಸಮಸ್ಯೆಯು ಸ್ಪೇಸ್‌ವಾಕ್ ಸಿದ್ಧತೆಗಳಿಗಾಗಲಿ ಅಥವಾ ನಿಲ್ದಾಣದ ಕಾರ್ಯಚಟುವಟಿಕೆಗಳಿಗಾಗಲಿ ಸಂಬಂಧಿಸಿದ್ದಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇತಿಹಾಸದಲ್ಲಿ ಇದೇ ಮೊದಲು:
ಗಣಕಯಂತ್ರದ ಮಾದರಿಗಳು (Computer modeling) ಪ್ರತಿ ಮೂರು ವರ್ಷಕ್ಕೊಮ್ಮೆ ಬಾಹ್ಯಾಕಾಶದಿಂದ ಇಂತಹ ವೈದ್ಯಕೀಯ ಸ್ಥಳಾಂತರದ ಅಗತ್ಯ ಬರಬಹುದು ಎಂದು ಅಂದಾಜಿಸಿದ್ದವು. ಆದರೆ ನಾಸಾದ 65 ವರ್ಷಗಳ ಮಾನವ ಸಹಿತ ಬಾಹ್ಯಾಕಾಶ ಯಾನದ ಇತಿಹಾಸದಲ್ಲಿ ಇಂತಹ ಘಟನೆ ಇದೇ ಮೊದಲು. ರಷ್ಯನ್ನರ ವಿಷಯದಲ್ಲಿ ಇದು ಈ ಹಿಂದೆ ಸಂಭವಿಸಿದೆ; 1985 ರಲ್ಲಿ ಸೋವಿಯತ್ ಕಾಸ್ಮೋನಾಟ್ ವ್ಲಾಡಿಮಿರ್ ವಾಸ್ಯುಟಿನ್ ಅವರು ಗಂಭೀರ ಸೋಂಕಿನ ಕಾರಣದಿಂದ ಮುಂಚಿತವಾಗಿ ಭೂಮಿಗೆ ಮರಳಬೇಕಾಗಿತ್ತು.








