ಬೆಂಗಳೂರು : ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಮೇಲೆ ಹಲ್ಲೆ ಮಾಡಿ ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಆರೋಪದಡಿ ಪತಿಯನ್ನು DCRE (ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಜೆಡ್ರೆಲಾ ಜಾಕೂಬ್ ಆರೂಪ್ ಬಂಧಿತ ಆರೋಪಿ. ಆಂಧ್ರಪ್ರದೇಶದ ನೆಲ್ಲೂರು ಮೂಲದ ಆರೋಪಿಯು ದೂರುದಾರ ಯುವತಿಯನ್ನು ಪ್ರೀತಿಸಿ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ. ದಂಪತಿಗೆ 11 ತಿಂಗಳ ಮಗುವಿದೆ. ಇಬ್ಬರು ಅನೋನ್ಯವಾಗಿದ್ದಾಗಲೇ ಪತಿಗೆ ತನ್ನ ಕಂಪನಿಯಲ್ಲಿ ಪತ್ನಿ ಕೆಲಸ ಕೊಡಿಸಿದ್ದರು. ವೃತ್ತಿಗಾಗಿ ಬೆಂಗಳೂರಿಗೆ ಬಂದ ಬಳಿಕ ಆರೋಪಿಯು ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗಿ ಪತ್ನಿಯನ್ನು ಕಡೆಗಣಿಸಿದ್ದ.
ಆರೋಪಿಯು ಭೂಪಾಲ್ ಮೂಲದ ಮಹಿಳೆಯನ್ನು ಪ್ರೀತಿಸಿದ್ದ. ಈ ಮಹಿಳೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಬಿಟಿಎಂ ಲೇಔಟ್ನಲ್ಲಿರುವ ಮನೆಯಲ್ಲಿ ಆರೋಪಿ ವಾಸ್ತವ್ಯ ಹೂಡಿದ್ದ. ಇದನ್ನು ಅರಿತ ಆರೋಪಿಯನ್ನು ಪತ್ನಿಯು ಪ್ರಶ್ನಿಸಿದಾಗ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದ. ಈ ಬಗ್ಗೆ ಪತಿ ವಿರುದ್ಧ ಜಾತಿನಿಂದನೆ ಹಾಗೂ ಹಲ್ಲೆ ಆರೋಪದಡಿ ಪತ್ನಿ ದೂರು ದಾಖಲಿಸಿದ್ದರು.
ಜಾತಿನಿಂದನೆ ಆರೋಪ ಹಿನ್ನೆಲೆಯಲ್ಲಿ ಡಿಸಿಆರ್ಇ ಅಧಿಕಾರಿಗಳು ಪ್ರಕರಣ ಕೈಗೆತ್ತಿಕೊಂಡು ಪ್ರೇಯಸಿ ಜೊತೆ ಮನೆಯಲ್ಲಿ ಏಕಾಂತದಲ್ಲಿರುವಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








