ಚಿಕ್ಕಮಗಳೂರು : ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಬರಿಮಲೆಗೆ ತೆರಳಿರುವ ಅಯ್ಯಪ್ಪ ಮಾಲಾಧಾರಿಗಳು ಕೇರಳ ಸರ್ಕಾರ ಹಾಗೂ ಅಲ್ಲಿನ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಲಾಧಾರಿಗಳು ರಸ್ತೆ ಮಧ್ಯೆಯೇ ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇರಳ ಸರ್ಕಾರ ಹಾಗೂ ಪೊಲೀಸರ ನಡೆಗೆ ಮಾಲಾಧಾರಿಗಳು ಆಕ್ರೋಶ ಹೊರಹಾಕಿದ್ದಾರೆ. ‘ಅಯ್ಯಪ್ಪಸ್ವಾಮಿ ಕರ್ನಾಟಕದಲ್ಲೇ ನೆಲೆಸಬೇಕಿತ್ತು, ಇಲ್ಲಿಗೆ ಏಕೆ ಬಂದ್ರಿ’ ಎಂದು ಭಾವುಕದ ಮಾತುಗಳನ್ನಾಡಿದ್ದಾರೆ.
ಕರ್ನಾಟಕದ ವಾಹನಗಳನ್ನು ಎರಿಮಲೈನಲ್ಲೇ ತಡೆಹಿಡಿಯುತ್ತಿರುವ ಕೇರಳ ಪೊಲೀಸರು ಅಲ್ಲಿಂದ ಮುಂದಕ್ಕೆ ಪ್ರಯಾಣಿಸಲು ಕೇರಳದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದಾರೆ ಎಂದು ಮಾಲಾಧಾರಿಗಳು ಆರೋಪಿಸಿದ್ದಾರೆ. ಎರಿಮಲೈಯಿಂದ ಶಬರಿಮಲೆಗೆ ಸುಮಾರು 100 ಕಿ.ಮೀ. ದೂರವಿದ್ದು, ಭಕ್ತರು ಅನಿವಾರ್ಯವಾಗಿ ತಮ್ಮ ವಾಹನಗಳನ್ನು ಬಿಟ್ಟು ಕೇರಳದ ವಾಹನಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕದ ವಾಹನಗಳಿಗೆ ಸೂಕ್ತ ಸ್ಪಂದನೆ ನೀಡದ ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಾಡಿಗೆ ವಾಹನ ಮಾಡಿಕೊಂಡು ಹೋಗಿರುವ ತರೀಕೆರೆಯ ಭಕ್ತರು ಈಗ ಅತ್ತ ಹೋಗಲಾಗದೆ, ಇತ್ತ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತುಂಬಾ ಜನ ಇದ್ದಾರೆ. ಇನ್ನೂ 2 ದಿನ ನಿಮ್ಮನ್ನ ಕಳಿಸಲ್ಲ ಎಂದು ಜನರಿಗೆ ಸಬೂಬು ನೀಡುತ್ತಿದ್ದಾರಂತೆ. ಕರ್ನಾಟಕ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸುವಂತೆ ಅಯ್ಯಪ್ಪ ಮಾಲಾಧಾರಿಗಳು ಆಗ್ರಹಿಸಿದ್ದಾರೆ.








