ಬೆಂಗಳೂರು : ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನಿಗದಿತ ದಿನಾಂಕದ ಒಳಗೆ ಜಿಬಿಎ ಪಾಲಿಕೆಗಳ ಚುನಾವಣೆ ನಡೆಸಲಾಗುವುದು. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನ ನೀಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಜಿಬಿಎ ಪಾಲಿಕೆಗಳ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಗಡುವು ನೀಡಿರುವ ಬಗ್ಗೆ ಮಾತನಾಡಿ, ಚುನಾವಣೆ ನಡೆಸುವುದು ನಮ್ಮ ಕರ್ತವ್ಯ. ಕಾರ್ಯಕರ್ತರಿಗೆ ಅಧಿಕಾರ ಕೊಡುವುದು, ಹೊಸ ನಾಯಕರನ್ನು ತಯಾರು ಮಾಡುತ್ತಿದ್ದೇವೆ. ನಾವು ಮಾಡುತ್ತಿರುವ ಕೆಲಸಕ್ಕೆ ಜನ ಬೆಂಬಲ ನೀಡುವ ವಿಶ್ವಾಸವಿದೆ. ನಾವು ಐದೂ ಪಾಲಿಕೆಗಳಲ್ಲೂ ಗೆಲ್ಲುತ್ತೇವೆ ಎಂದರು.
ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸಿದ್ದು, ಅದು ಅವರಿಗೆ ಬಿಟ್ಟ ವಿಚಾರ. ಸರ್ಕಾರ ಎಲ್ಲಾ ರೀತಿಯ ಆದೇಶ ನೀಡಲಿದೆ. ನಮಗೆ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ನಡೆಯಬೇಕು. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಅನುಸಾರ ಏನೆಲ್ಲಾ ತೀರ್ಮಾನ ಮಾಡಬೇಕೋ ಅದನ್ನು ಮಾಡಲಿದೆ ಎಂದು ತಿಳಿಸಿದರು.








