ಬೆಂಗಳೂರು : ವ್ಯಕ್ತಿ, ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ಅಪರಾಧವೆಂದು ಪರಿಗಣಿಸಿ ಒಂದು ಲಕ್ಷ ರು. ದಂಡ ಹಾಗೂ 3 ವರ್ಷಗಳವರೆಗೆ ಜೈಲುಶಿಕ್ಷೆಗೆ ಗುರಿಯಾಗಿಸುವ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ) ಕಾಯ್ದೆ 2025’ರ ರಾಜ್ಯ ಪತ್ರವನ್ನು ಹೊರಡಿಸಲಾಗಿದೆ.
ರಾಜ್ಯಪತ್ರದಲ್ಲಿ ಏನಿದೆ?
ರಾಜ್ಯದಲ್ಲಿ ಒಬ್ಬ ವ್ಯಕ್ತಿ ಅಥವಾ ಅವನ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸಲು ಮತ್ತು ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳನ್ನು ಉಪಬಂಧಿಸುವುದಕ್ಕಾಗಿ ಒಂದು ಅಧಿನಿಯಮ;
ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಒಂದು ಗುರಿಯಾಗಿ ಪ್ರತಿಷ್ಠಾಪಿಸಲಾದ ವ್ಯಕ್ತಿ ಘನತೆಯನ್ನು ಖಾತ್ರಿಪಡಿಸಿ, ನಾಗರೀಕರಲ್ಲಿ ಭಾತೃತ್ವವನ್ನು ಉತ್ತೇಜಿಸಲಾಗಿರುವುದರಿಂದ, ಮತ್ತು ಯಾರೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರವು ಸಂವಿಧಾನದ ಭಾಗ-11ರಲ್ಲಿ ಪ್ರತಿಷ್ಟಾಪಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದರಿಂದ. ಮತ್ತು ರಾಜ್ಯದ ಕೆಲವು ಭಾಗಗಳಲ್ಲಿ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರದ ಅಮಾನವೀಯ ಪದ್ಧತಿಯು ಇನ್ನೂ ಉಳಿದಿರುವುದನ್ನು ಗಮನಿಸಲಾಗಿರುವುದರಿಂದ;
ಮತ್ತು ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರದ ಪಿಡುಗನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಈಗಾಗಲೇ ಇರುವ ಕಾನೂನುಗಳು ಪರಿಣಾಮಕಾರಿಯಲ್ಲವೆಂದು ಸಾಬೀತಾಗಿರುವುದು ಕಂಡುಬಂದಿರುವುದರಿಂದ;
ಮತ್ತು ಸಾರ್ವಜನಿಕ ಕ್ಷೇಮಾಭಿವೃದ್ಧಿಯ ಹಿತಾಸಕ್ತಿಯಲ್ಲಿ ಸಾಮಾಜಿಕ ಸುಧಾರಣೆಯ ವಿಷಯವಾಗಿ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುವುದು ಅಗತ್ಯವಾಗಿರುವುದರಿಂದ;
ಹಾಗೂ ರಾಜ್ಯದಲ್ಲಿ ಜನರು ಅವರ ಮಾನವ ಹಕ್ಕುಗಳೊಂದಿಗೆ ಸೌಹಾರ್ದದಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ, ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸಲು ಮತ್ತು ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳನ್ನು ಉಪಬಂಧಿಸುವುದು ಯುಕ್ತವಾಗಿರುವುದರಿಂದ; ಇದು, ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-
ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.
(1) ಈ ಅಧಿನಿಯಮವನ್ನು ಕರ್ನಾಟಕ ಸಾಮಾಜಿಕ
ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಅಧಿನಿಯಮ, 2025 ಎಂದು ಕರೆಯತಕ್ಕದ್ದು.
(2) ಇದು ರಾಜ್ಯ ಸರ್ಕಾರವು ಈ ಕುರಿತು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದ ಅಂಥ ದಿನಾಂಕದಂದು ಜಾರಿಗೆ ಬರತಕ್ಕದ್ದು.
ಪರಿಭಾಷೆಗಳು.-
(1) ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಜಾತಿ ಪಂಚಾಯತಿ” ಎಂದರೆ ಅದೇ ಸಮುದಾಯದಲ್ಲಿನ ಹಲವು ಪದ್ಧತಿಗಳನ್ನು
ನಿಯಂತ್ರಿಸಲು ಸಮುದಾಯದೊಳಗೆ ಕಾರ್ಯನಿರ್ವಹಿಸುವ, ಯಾರೇ ಸದಸ್ಯನ ವೈಯಕ್ತಿಕ ಮತ್ತು ಸಾಮಾಜಿಕ ನಡವಳಿಕೆಯನ್ನು ನಿಯಂತ್ರಿಸುವ ಹಾಗೂ ಅವರ ಕುಟುಂಬಗಳನ್ನೂ ಒಳಗೊಂಡಂತೆ ಅದರ ಸದಸ್ಯರ ಪೈಕಿ ಯಾವುದೇ ವಿವಾದಗಳನ್ನು ಮೌಖಿಕ ಅಥವಾ ಲಿಖಿತವಾದ ವಿದ್ಯುಕ್ತ ಹೇಳಿಕೆಗಳ (dictum) ಮೂಲಕ ಒಟ್ಟಾಗಿ ಪರಿಹರಿಸುವ ಅಥವಾ ನಿರ್ಧರಿಸುವ, “ಪಂಚಾಯತಿ” ಅಥವಾ ಯಾವುದೇ ಇತರ ಹೆಸರು ಅಥವಾ ವಿವರಣೆಯಿಂದ ಕರೆಯಲಾಗುವ ನೋಂದಾಯಿತ ಅಥವಾ ನೋಂದಾಯಿತವಲ್ಲದ, ಔಪಚಾರಿಕ ಅಥವಾ ಅನೌಪಚಾರಿಕವಾದ ಯಾವುದೇ ಸಮುದಾಯಕ್ಕೆ ಸೇರಿರುವ ವ್ಯಕ್ತಿಗಳ ಗುಂಪಿನ ಮೂಲಕ ರಚಿಸಲಾದ ಸಮಿತಿ ಅಥವಾ ನಿಕಾಯ;
(ಬಿ) “ಸಮುದಾಯ” ಎಂಬುದು ಜಾತಿ ಪಂಚಾಯತಿಗೆ ಸಂಬಂಧಿಸಿದಂತೆ, ಹುಟ್ಟು, ಪರಿವರ್ತನೆ ಅಥವಾ ಯಾವುದೇ ಧಾರ್ಮಿಕ ವಿಧಿವಿಧಾನಗಳ ಅಥವಾ ಉತ್ಸವಗಳ ಆಚರಣೆ, ಅವರು ಸೇರಿರುವ ಅದೇ ಧರ್ಮ ಅಥವಾ ಧಾರ್ಮಿಕ ಪಂಥ, ಜಾತಿ ಅಥವಾ ಉಪಜಾತಿಯ ಕಾರಣದಿಂದಾಗಿ ಒಟ್ಟಿಗೆ ಸೇರುವ ಸದಸ್ಯರ ಗುಂಪು;
(ಸಿ) “ಸಾಮಾಜಿಕ ಬಹಿಷ್ಕಾರ” ಎಂದರೆ 3ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಸಮುದಾಯದ ಸದಸ್ಯರ ನಡುವೆ ಯಾವುದೇ ಸಾಮಾಜಿಕ ತಾರತಮ್ಯದ ಕುರಿತು ಮೌಖಿಕವಾದ ಅಥವಾ ಲಿಖಿತವಾದ ಪರೋಕ್ಷ ಸೂಚನೆ (gesture) ಅಥವಾ ಕೃತ್ಯ;
(ಡಿ) “ಸರ್ಕಾರ” ಎಂದರೆ ಕರ್ನಾಟಕ ಸರ್ಕಾರ;
(ಇ) “ಮಾನವ ಹಕ್ಕುಗಳು” ಎಂಬುದು ಮಾನವ ಹಕ್ಕುಗಳ ರಕ್ಷಣೆ ಅಧಿನಿಯಮ, 1993 (1994ರ ಕೇಂದ್ರ ಅಧಿನಿಯಮ 10)ರ 2ನೇ ಪ್ರಕರಣದ (1)ನೇ ಉಪ-ಪ್ರಕರಣದಲ್ಲಿನ (ಡಿ) ಖಂಡದಲ್ಲಿ ಅದಕ್ಕೆ ನೀಡಲಾದ ಅದೇ ಅರ್ಥವನ್ನು ಹೊಂದಿರತಕ್ಕದ್ದು;
(ಎಫ್) “ಸದಸ್ಯ” ಎಂದರೆ ಯಾವುದೇ ಸಮುದಾಯದ ಸದಸ್ಯನಾಗಿರುವ ಒಬ್ಬ ವ್ಯಕ್ತಿ;
(ಜಿ) ನಿಯಮಿಸಲಾದುದು” ಎಂದರೆ ಈ ಅಧಿನಿಯಮದ ಅಡಿಯಲ್ಲಿ ನಿಯಮಗಳ ಮೂಲಕ ನಿಯಮಿಸಲಾದುದು;
(ಎಚ್) “ಸಾಮಾಜಿಕ ಬಹಿಷ್ಕಾರ ನಿಷೇಧ ಅಧಿಕಾರಿ” ಎಂದರೆ 15ನೇ ಪ್ರಕರಣದಡಿ ಹಾಗೆ ಗೊತ್ತುಪಡಿಸಿದ ಅಧಿಕಾರಿ; ಮತ್ತು
(ಐ) “ಸಂತ್ರಸ್ತ” ಎಂದರೆ ಸಾಮಾಜಿಕ ಬಹಿಷ್ಕಾರ ಮಾಡಿರುವ ಕಾರಣದಿಂದಾಗಿ ತೊಂದರೆಗೊಳಗಾದ ಅಥವಾ ದೈಹಿಕವಾದ ಅಥವಾ ಹಣಕಾಸಿನ ತೊಂದರೆ ಅಥವಾ ಆತನ ಸ್ವತ್ತಿಗೆ ತೊಂದರೆಯನ್ನು ಅನುಭವಿಸಿದ ವ್ಯಕ್ತಿ ಮತ್ತು ಆತನ ಸಂಬಂಧಿಕರು, ಕಾನೂನುಬದ್ಧ ಪೋಷಕರು ಮತ್ತು ಕಾನೂನುಬದ್ಧ ವಾರಸುದಾರರನ್ನು ಒಳಗೊಳ್ಳುವುದು.
(2) ಈ ಅಧಿನಿಯಮದಲ್ಲಿ ಬಳಸಲಾದ ಆದರೆ ಪರಿಭಾಷಿಸದಿರುವ ಪದಗಳು ಮತ್ತು ಪದಾವಳಿಗಳು ಭಾರತೀಯ ನ್ಯಾಯ ಸಂಹಿತೆ, 2023 (2023ರ ಕೇಂದ್ರ ಅಧಿನಿಯಮ 45), ಭಾರತೀಯ ಸಾಕ್ಷ್ಯ ಅಧಿನಿಯಮ, 2023 (2023ರ ಕೇಂದ್ರ ಅಧಿನಿಯಮ 47), ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, 2023 (2023ರ ಕೇಂದ್ರ ಅಧಿನಿಯಮ 46), ಅಥವಾ ಸಂದರ್ಭಾನುಸಾರ ಮಾನವ ಹಕ್ಕುಗಳ ರಕ್ಷಣೆ ಅಧಿನಿಯಮ, 1993 (1994ರ ಕೇಂದ್ರ ಅಧಿನಿಯಮ 10)ರಲ್ಲಿ ಅನುಕ್ರಮವಾಗಿ ಅವುಗಳಿಗೆ ಆ ಅಧಿನಿಯಮತಿಗಳಲ್ಲಿ ನೀಡಲಾದ ಅರ್ಥಗಳನ್ನು ನೀಡಲಾಗಿದೆಯೆಂದು ಭಾವಿಸತಕ್ಕದ್ದು.









