ಮಂಡ್ಯ: ಸಾರ್ವಜನಿಕ ಸೋಮವಾರ ಪ್ರಾರಂಭವಾದ ನಂತರ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಸ್ವೀಕೃತವಾದ ಅರ್ಜಿಗಳನ್ನು ನಿಯಮಾನುಸಾರ ಇತ್ಯರ್ಥಗೊಳಿಸಲು ಕ್ರಮವಹಿಸಬೇಕೆಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್ ಅವರು ಮದ್ದೂರು ತಾಲ್ಲೂಕು ಪಂಚಾಯತ್ ಇಓ ಮತ್ತು ಮದ್ದೂರು ತಾಲ್ಲೂಕಿನ ಪಿಡಿಓ ಗಳಿಗೆ ಸೂಚಿಸಿದರು.
ಸೋಮವಾರ ಮದ್ದೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಮಳವಳ್ಳಿ ಮತ್ತು ನಾಗಮಂಗಲ ತಾಲ್ಲೂಕುಗಳಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಗಳ ಅನುಪಾಲನಾ ಸಭೆಗಳನ್ನು ನಡೆಸಲಾಗಿದೆ. ಇಂದು ಮದ್ದೂರಿನಲ್ಲಿ ಸಭೆ ನಡೆಸಲಾಗುತ್ತಿದ್ದು ಇದೇ ಮಾದರಿಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಭೆ ನಡೆಸಲಾಗುವುದು ಎಂದರು.
ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್ ಗಳು ಕಡ್ಡಾಯವಾಗಿ ಪ್ರತಿ ಸೋಮವಾರ ಸಾರ್ವಜನಿಕ ಕುಂದುಕೊರತೆ ಸಭೆ ಆಯೋಜಿಸಬೇಕು ಮತ್ತು ಪ್ರತೀ ಗ್ರಾಮ ಪಂಚಾಯಿತಿಯು ಸಭೆಯಲ್ಲಿ ಸ್ವೀಕೃತವಾಗುವ ಅರ್ಜಿಗಳ ವಿವರ ಮತ್ತು ತೆಗೆದುಕೊಂಡ ಕ್ರಮದ ವಿವರವನ್ನು ವಹಿಯಲ್ಲಿ ನಮೂದಿಸಿರಬೇಕು ಎಂದು ಸೂಚಿಸಿದರು. ಹಾಗೆಯೇ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ನಿಂದಲೂ ಸ್ವೀಕೃತವಾಗುವ ಅರ್ಜಿಗಳಿಗೆ ಪ್ರತ್ಯೇಕ ವಹಿಗಳನ್ನು ಇಟ್ಟು ನಿರ್ವಹಣೆ ಮಾಡಬೇಕು, ಈ ಬಗ್ಗೆ ಗ್ರಾ.ಪಂ. ಭೇಟಿಯ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಮದ್ದೂರು ತಾಲ್ಲೂಕಿನ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಈವರೆಗೆ 1272 ಅರ್ಜಿಗಳು ಸ್ವೀಕೃತವಾಗಿದ್ದು, ಎಲ್ಲಾ ಅರ್ಜಿಗಳಿಗೂ ನಿಯಮಾನುಸಾರ ಕ್ರಮವಹಿಸಲಾಗಿರುತ್ತದೆ ಹಾಗೂ ಜಿಲ್ಲಾ ಪಂಚಾಯತ್ ನಿಂದ ವರ್ಗಾಯಿಸಲಾಗಿದ್ದ 35 ಅರ್ಜಿಗಳ ಪೈಕಿ 26 ಅರ್ಜಿಗಳಿಗೆ ನಿಯಮಾನುಸಾರ ಕ್ರಮವಹಿಸಲಾಗಿದ್ದು, ಉಳಿದ 9 ಅರ್ಜಿಗಳನ್ನು ಇತ್ಯರ್ಥಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ಮದ್ದೂರು ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ (ಆಡಳಿತ) ಹಾಗೂ ಮದ್ದೂರು ತಾ.ಪಂ.ನ ಆಡಳಿತಾಧಿಕಾರಿಗಳಾದ ಶಿವಲಿಂಗಯ್ಯ, ಮದ್ದೂರು ತಾ.ಪಂ. ಇಓ ರಾಮಲಿಂಗಯ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಧುಸೂದನ್, ತಾ.ಪಂ. ಸಹಾಯಕ ನಿರ್ದೇಶಕ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.








