ಹಾಸನ : ಹಾಸನದಲ್ಲಿ ಭೀಕರವಾದ ಕೊಲೆಯಾಗಿದ್ದು ತಂದೆಯನ್ನೇ ರಾಡ್ ನಿಂದ ಹೊಡೆದು ಮಗ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕುಪಿತ ಮಗನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಯಲ್ಲಿ ಶನಿವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಸತೀಶ್ (60) ಎಂದು ಗುರುತಿಸಲಾಗಿದೆ. ಪುತ್ರ ರಂಜಿತ್ (28) ತಂದೆಯನ್ನು ಕೊಲೆಗೈದವ. ತಾಯಿ ಮತ್ತು ಮಗ ಕೆ.ಆರ್.ನಗರದಲ್ಲಿ ನೆಲೆಸಿದ್ದರು. ಇದೇ ವಿಷಯಕ್ಕೆ ತಂದೆ-ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಶನಿವಾರ ರಾತ್ರಿ ಗಲಾಟೆ ವಿಕೋಪಕ್ಕೆ ಹೋಗಿದೆ. ಕೋಪಗೊಂಡ ರಂಜಿತ್ ಸ್ಟೀಲ್ ರಾಡ್ನಿಂದ ತಂದೆಯ ತಲೆಗೆ ಹೊಡೆದಿದ್ದಾನೆ.
ಇದರಿಂದ ಗಂಭೀರವಾಗಿ ಗಾಯಗೊಂಡ ತಂದೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








