ಬೆಂಗಳೂರು : ಬೆಂಗಳೂರಿನ ಶ್ರೀನಿವಾಸಪುರದ ಕೋಗಿಲು ಬಡಾವಣೆ ತೆರವು ಪ್ರಕರಣದಲ್ಲಿ ಸಂತ್ರಸ್ತರಾದ 161 ಕುಟುಂಬಗಳ ಪೈಕಿ ಕೇವಲ 26 ಮಂದಿಗಷ್ಟೇ ಪರ್ಯಾಯವಾಗಿ ಮನೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಈ ಕುರಿತಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಹಿತಿ ನೀಡಿದ್ದು, 26 ಮಂದಿಯ ದಾಖಲೆ ಪರಿಶೀಲನೆ ನಡೆಸಲಾಗಿದೆ. ಕೋಗಿಲು ಸಂತ್ರಸ್ತರಿಗೆ ಮನೆ ನೀಡುವ ವಿಚಾರವಾಗಿ ಸಚಿವ ಕೃಷ್ಣಬೈರೇಗೌಡರು ನನಗೆ ಕರೆ ಮಾಡಿದ್ದರು. 26 ಜನರ ದಾಖಲೆ ಪರಿಶೀಲನೆ ಮುಗಿದಿದೆ ಎಂದು ಹೇಳಿದ್ದಾರೆ ಎಂದರು.
ಪ್ರಕರಣ ಹಿನ್ನಲೆ
ಕೋಗಿಲು ಬಡಾವಣೆಯಲ್ಲಿ ಜಿಬಿಎಗೆ ಸೇರಿದ ಭೂಮಿಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆಂದು ಜಿಬಿಎ ಅಧಿಕಾರಿಗಳು ಕಳೆದ ವಾರ ತೆರವು ಕಾರ್ಯಾಚರಣೆ ಮಾಡಿ 180 ಕುಟುಂಬಗಳನ್ನು ಸ್ಥಳಾಂತರಿಸಿದ್ದರು. ಬಳಿಕ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧ ಬುಲ್ಡೋಜರ್ ಸಂಸ್ಕೃತಿ ಅಳವಡಿಸಿಕೊಂಡಿದೆ ಎಂದು ಆರೋಪಿಸಿದ್ದರು. ಕೇರಳದ ರಾಜ್ಯಸಭಾ ಸದಸ್ಯರು ಮತ್ತು ಆಡಳಿತ ಪಕ್ಷದ ಶಾಸಕರು ಕೂಡ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಸ್ಥರಿಗೆ ಬೆಂಬಲ ನೀಡಿದ್ದರು. ಆ ನಂತರ ಈ ಪ್ರಕರಣ ದೇಶದ ಗಮನ ಸೆಳೆಯಿತು.








