ಮಂಡ್ಯ : ಮದ್ದೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆರಿದ್ದು, ನಿರೀಕ್ಷೆಗೂ ಮೀರಿ ಅಭಿವೃದ್ಧಿ ಹೊಂದಲಿದ್ದು, ಇದಕ್ಕೆ ಎಲ್ಲರು ಸಹಕಾರ ನೀಡಬೇಕೆಂದು ನಗರ ಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್ ಮನವಿ ಮಾಡಿದರು.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನದಿಂದಾಗ ಮದ್ದೂರು ಪುರಸಭೆಯನ್ನು ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಯನ್ನಾಗಿ ಮೇಲ್ದರ್ಜೆಗೆರಿಸಿದ್ದಾರೆ. ಇದಕ್ಕೆ ವಿರೋಧ ಮಾಡುವುದು, ಹೋರಾಟ ಮಾಡುವುದು ಸರಿಯಾದ ಕ್ರಮವಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕರ ಜತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಕೆ.ಎಂ.ಉದಯ್ ಅವರು ಶಾಸಕರಾದ ಎರಡೇ ವರ್ಷಗಳಲ್ಲಿ ಒಬ್ಬ ರೈತನ ಮಗನಾಗಿ ರೈತರ ಕಷ್ಟಗಳನ್ನು ಹತ್ತಿರದಿಂದ ಅರಿತು ರೈತರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಸುಮಾರು 1500 ಕೋಟಿಗೂ ಹೆಚ್ಚಿನ ಅನುದಾನ ತಂದು ನಗರದಲ್ಲಿ ಹಾದು ಹೋಗಿರುವ ಕೆಮ್ಮಣ್ಣು ನಾಲೆಯನ್ನು 100 ಕೋಟಿ ವೆಚ್ಚದಲ್ಲಿ ಆಧುನಿಕರಣ, ಪೇಟೆ ಬೀದಿಯನ್ನು 200 ಕೋಟಿ ವೆಚ್ಚದಲ್ಲಿ ಅಗಲೀಕರಣ, ಮದ್ದೂರಮ್ಮನ ಕೆರೆ ಹಾಗೂ ಸೂಳೆಕೆರೆ ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿಯಲ್ಲಿ 400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮತ್ತು ನಾಲೆಗಳ ಆಧುನಿಕರಣ, ಸೋಮನಹಳ್ಳಿ ಬಳಿ 220 ಕೆವಿ ಸಬ್ ಸ್ಟೇಷನ್ ಅನ್ನು 250 ಕೋಟಿ ವೆಚ್ಚದಲ್ಲಿ ಸೇರಿದಂತೆ ತಾಲೂಕಿನಲ್ಲಿ ವಿವಿಧ ಮೂಲಭೂತ ಸೌಕರ್ಯಗಳು, ನಗರದ ಪ್ರತಿ ವಾರ್ಡ್ ನ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡುವ ಮೂಲಕ ಹಿಂದೆಂದು ನಡೆಯದ ರೀತಿಯಲ್ಲಿ ತಾಲೂಕಿನಲ್ಲಿ ಶಾಶ್ವತ ಕಾಮಗಾರಿಗಳ ಅಭಿವೃದ್ಧಿ ಪರ್ವ ಶುರುವಾಗಿದೆ ಎಂದರು.
ಮದ್ದೂರು ಪುರಸಭೆ ನಗರಸಭೆಯಾಗುವ ಸಂಬಂಧ ಶಾಸಕರು ಪುರಸಭಾ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸದಸ್ಯರಿಂದ ಒಪ್ಪಿಗೆ ಪಡೆದು ನಂತರ ನಾಲ್ಕು ಗ್ರಾಮ ಪಂಚಾಯಿತಿಗಳ ಆಡಳಿತ ಮಂಡಳಿಯಿಂದ ನಿಯಮಾನುಸಾರವಾಗಿ ಅನುಮೋದನೆ ಪಡೆದ ಬಳಿಕವೇ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ ರಾಜ್ಯಪಾಲರಿಂದ ಅಂಕಿತಗೊಂಡ ನಂತರ ನಗರಸಭೆಯನ್ನಾಗಿ ಮೇಲ್ದರ್ಜೆಗೆರಿಸಿದ್ದಾರೆಯೇ ವಿನಃ ಶಾಸಕರು ಯಾವುದೇ ದುರುದ್ದೇಶ, ಹಣ ಮಾಡುವ ಉದ್ದೇಶದಿಂದ ಏಕಾಏಕಿ ನಿರ್ಧಾರ ಕೈಗೊಂಡಿಲ್ಲ ಎಂದರು.
ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್ ಮಾತನಾಡಿ, ನಗರಸಭೆಯಾದರೆ ಗ್ರಾಮ ಪಂಚಾಯಿತಿಗಳಿಗಿಂತ ಹೆಚ್ಚಿನ ಅನುದಾನ ಸರ್ಕಾರದಿಂದ ಬಂದು ಸಮಗ್ರ ಅಭಿವೃದ್ಧಿಯಾಗುತ್ತದೆ. ಇದರಿಂದ ಮದ್ದೂರು ಹಾಗೂ ನಗರಸಭೆಗೆ ಒಳಪಡುವ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಇದನ್ನರಿತು ನಗರಸಭೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರು ಪ್ರತಿಭಟನೆ ಕೈ ಬಿಟ್ಟು ಶಾಸಕರ ಜತೆ ಕೈ ಜೋಡಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ವನಿತಾ, ಮಾಜಿ ಸದಸ್ಯರಾದ ಎಂ.ಬಿ.ಸಚಿನ್, ಸಿದ್ದರಾಜು, ಬಸವರಾಜು, ಎಂ.ಡಿ.ಮಹಾಲಿಂಗಯ್ಯ, ಮುಖಂಡರಾದ ಅರುಣ್, ರಘು, ಮಹೇಶ್, ಮುನ್ಸಿಫ್, ಸಾದತ್ ಸೇರಿದಂತೆ ಇತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮಂಡ್ಯ ನಗರದ ವಾಹನದಟ್ಟಣೆ ಕುರಿತು ವರದಿ ಸಿದ್ಧಪಡಿಸಲು ಸೂಚನೆ: DC ಡಾ.ಕುಮಾರ








