ಮೈಸೂರು: ಮೈಸೂರು ವಿಭಾಗದ ನೈರುತ್ಯ ರೈಲ್ವೆ ವಿಭಾಗದಲ್ಲಿನ ಎಕ್ಸ್‌ಪ್ರೆಸ್, ಸೂಪರ್‌ಫಾಸ್ಟ್ ಹಾಗೂ ಪ್ರಯಾಣಿಕ ರೈಲುಗಳ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ.
ಮೈಸೂರು ವಿಭಾಗದ ಮೂಲಕ ಸಂಚರಿಸುವ ಹಾಗೂ ಮೈಸೂರು ವಿಭಾಗದಿಂದ ಆರಂಭವಾಗುವ/ಅಂತ್ಯಗೊಳ್ಳುವ ಹಲವು ಎಕ್ಸ್‌ಪ್ರೆಸ್, ಸೂಪರ್‌ಫಾಸ್ಟ್, ಮೆಮು ಮತ್ತು ಪ್ರಯಾಣಿಕ ರೈಲುಗಳ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಈ ಪರಿಷ್ಕರಣೆಯಡಿ ಕೆಲವು ರೈಲುಗಳ ಸಂಚಾರ ಸಮಯವನ್ನು ಮುಂಚಿತಗೊಳಿಸಲಾಗಿದ್ದು, ಕೆಲವು ರೈಲುಗಳ ಸಂಚಾರ ಸಮಯವನ್ನು ಮುಂದೂಡಲಾಗಿದೆ. ಈ ಬದಲಾವಣೆಗಳು ವಿವಿಧ ದಿನಾಂಕಗಳಿಂದ 01.01.2026ರಿಂದ ಜಾರಿಗೆ ಬರಲಿವೆ.
ಉತ್ತಮ ಕಾರ್ಯಾಚರಣಾ ದಕ್ಷತೆ, ಸಮಯಪಾಲನೆಯ ಸುಧಾರಣೆ ಹಾಗೂ ವಿಭಾಗೀಯ ಸಂಚಾರವನ್ನು ಸಮರ್ಪಕವಾಗಿ ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಈ ವೇಳಾಪಟ್ಟಿ ಪರಿಷ್ಕರಣೆ ಕೈಗೊಳ್ಳಲಾಗಿದೆ.
ಈ ಬದಲಾವಣೆಗಳ ವ್ಯಾಪ್ತಿಯಲ್ಲಿ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಅರಸೀಕೆರೆ, ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಯಶವಂತಪುರ, ಬೆಂಗಳೂರು, ಚೆನ್ನೈ, ತಿರುಪತಿ, ಅಜ್ಮೀರ್, ವಾರಾಣಸಿ, ಗಾಂಧಿಧಾಮ್, ಬಾರ್ಮೇರ್, ಉದಯಪುರ, ಚಂಡೀಗಢ ಹಾಗೂ ಹಜ್ರತ್ ನಿಜಾಮುದ್ದೀನ್ ನಗರಗಳನ್ನು ಸಂಪರ್ಕಿಸುವ ದೀರ್ಘ ದೂರದ ರೈಲುಗಳನ್ನು ಸೇರಿದಂತೆ ಹಲವು ಮೇಲ್/ಎಕ್ಸ್‌ಪ್ರೆಸ್, ಸೂಪರ್‌ಫಾಸ್ಟ್, ಮೆಮು ಮತ್ತು ಪ್ರಯಾಣಿಕ ರೈಲು ಸೇವೆಗಳು ಒಳಗೊಂಡಿವೆ. ಈ ಪತ್ರಿಕಾ ಪ್ರಕಟಣೆಯೊಂದಿಗೆ ಎಲ್ಲಾ ರೈಲುಗಳ ವಿವರವಾದ ಪಟ್ಟಿಯನ್ನು ಅನೇಕ ಅನುಬಂಧಗಳಲ್ಲಿ ಸಂಯೋಜಿಸಲಾಗಿದೆ.
ಪ್ರಯಾಣಿಕರು ಪರಿಷ್ಕೃತ ವೇಳಾಪಟ್ಟಿಯನ್ನು ಗಮನದಿಂದ ಪರಿಶೀಲಿಸಿ, ತಮ್ಮ ಪ್ರಯಾಣ ಆರಂಭಿಸುವ ಮೊದಲು ಎನ್‌ಟಿಇಎಸ್ (NTES), ಐಆರ್‌ಸಿಟಿಸಿ (IRCTC) ವೆಬ್‌ಸೈಟ್/ಆಪ್, 139 ಸಹಾಯವಾಣಿ ಅಥವಾ ಹತ್ತಿರದ ರೈಲು ನಿಲ್ದಾಣದ ಮೂಲಕ ರೈಲು ಸಮಯವನ್ನು ದೃಢಪಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.








