ಹುಬ್ಬಳ್ಳಿ : ಇಲ್ಲಿನ ಕೆಎಂಸಿಆರ್ಐ ಆಸ್ಪತ್ರೆ ಮೇಲೆ ಲೋಕಾಯುಕ್ತರು ಮಂಗಳವಾರ ದಾಳಿ ಮಾಡಿದ್ದು, ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಔಷಧಿಗಳನ್ನು ಹೊರಗೆ ಬರೆದು ಕೊಡುತ್ತಿರುವ ಬಗ್ಗೆ ದೂರುಗಳಿದ್ದವು. ವ್ಯಕ್ತಿಯೋರ್ವ ಇಂಜೆಕ್ಷನ್ಗಾಗಿ ಪರದಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ ಸೂಚನೆ ನೀಡಿದ್ದರು. ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಸೂಚನೆ ನೀಡಿದ್ದರು.
ಈ ವೇಳೆ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಅಕ್ಟೊಬರ್ ತಿಂಗಳಲ್ಲಿ ರೈತನೋರ್ವ ಔಷಧಿಗಾಗಿ ತಿರುಗಾಡುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸ್ವಯಂ ದೂರು ದಾಖಲಿಸಿಕೊಂಡು ಪ್ರಾಥಮಿಕ ವರದಿ ನೀಡಲು ನಮಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕರಿಂದ ದೂರು ಸಹ ಕೊಡಲಾಗಿತ್ತು. ಪ್ರಾಥಮಿಕ ವಿಚಾರಣೆ ಮಾಡಿ ವರದಿ ಕೇಳಿದ್ರು. ಹೀಗಾಗಿ ಶೋಧ ಮಾಡುತ್ತಿದ್ದೇವೆ. ಚಿಕಿತ್ಸೆ ವಿಭಾಗ, ಶುಚಿತ್ವ, ಆಡಳಿತ ವ್ಯವಸ್ಥೆ ಬಗ್ಗೆ ದೂರುಗಳು ಬಂದಿವೆ. ಈಗ ಪರಿಶೀಲನೆ ಮಾಡ್ತಾ ಇದ್ದೇವೆ ಎಂದರು.
ಸರ್ಕಾರಿ ವೈದ್ಯರು ಹೊರಗಡೆಗೆ ಚೀಟಿ ಬರೆದುಕೊಡುತ್ತಿಲ್ಲ. ನರಗುಂದದಲ್ಲಿ ವೈದ್ಯರು ಹೇಳಿದ್ರು ಅಂತ ಹುಬ್ಬಳ್ಳಿಯಲ್ಲಿ ಹುಡುಕುತ್ತಾ ಇದ್ದರು. 12 ತಂಡಗಳ 40 ಜನ ಸಿಬ್ಬಂದಿಯಿಂದ ಪರಿಶೀಲನೆ ಮಾಡುತ್ತಿದ್ದೇವೆ. ಒಳರೋಗಿ, ಹೊರರೋಗಿಗಳ ಹತ್ತಿರ ಕೇಳುತ್ತೇವೆ. ಉಪ ಲೋಕಾಯುಕ್ತರು ಸ್ವಯಂ ದೂರು ದಾಖಲಿಸಿಕೊಂಡು ವರದಿ ಕೇಳಿದ್ರು. ಹೀಗಾಗಿ ಪರಿಶೀಲನೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.








