ಶಿವಮೊಗ್ಗ : ಶಿವಮೊಗ್ಗದಲ್ಲಿ ಭೀಕರ ಮರ್ಡರ್ ಆಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ವ್ಯಕ್ತಿಯೋರ್ವ ಕೊಲೆಗೀಡಾದ ಘಟನೆ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಮುಂಭಾಗ ಮಂಗಳವಾರ ರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಿವಮೊಗ್ಗದ ಕಾಶಿಪುರ ಬಡಾವಣೆಯ ತಮಿಳು ಕ್ಯಾಂಪ್ ನಿವಾಸಿ ಅರುಣ್ (26) ಎಂದು ಗುರುತಿಸಲಾಗಿದೆ.
ಈತ ಗಾರೆ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ 8:45ರ ಸುಮಾರಿಗೆ ತನ್ನ ಬೈಕ್ನಲ್ಲಿ ಎಪಿಎಂಪಿ ತರಕಾರಿ ಮಾರುಕಟ್ಟೆ ಬಳಿಯ ಶ್ರೀನಿಧಿ ವೈನ್ಸ್ ಮುಂಭಾಗ ಬಂದಿದ್ದ. ಬೈಕ್ ನಿಲ್ಲಿಸುತ್ತಿದ್ದಂತೆಯೇ ಹಿಂದಿನಿಂದ ಇನ್ನೊಂದು ಬೈಕ್ನಲ್ಲಿ ಬಂದ ಇಬ್ಬರು ರಾಡ್ನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ.
ಇದರಿಂದ ಅರುಣ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಹಲ್ಲೆ ನಡೆಸಿದವರು ಕೆಲಕಾಲ ಅಲ್ಲೇ ನಿಂತು, ಬಳಿಕ ಅರುಣ್ ತಂದಿದ್ದ ಬೈಕ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.








