ಬೆಂಗಳೂರು : “ನಗರದ ವಿದ್ಯಾರ್ಥಿಗಳಿಗೆ ಹಳ್ಳಿ ಬದುಕಿನ ಬಗ್ಗೆ ಅರಿವು ಮೂಡಿಸಲು ಪಠ್ಯಕ್ರಮ ರೂಪಿಸಬೇಕು. ಈ ಬಗ್ಗೆ ಕೃಷಿ ಸಚಿವರು ಹಾಗೂ ಕೃಷಿ ವಿವಿ ಉಪಕುಲಪತಿಗಳು ರೂಪುರೇಷೆ ಸಿದ್ಧಪಡಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೂಚಿಸಿದರು.
ಬೆಂಗಳೂರು ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ರೈತ ಸಂತೆ ಹಾಗೂ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ಒಂದು ವರ್ಷದ ಹಿಂದೆ ನಾನು ಅಮೆರಿಕಕ್ಕೆ ಹೋದಾಗ ಸ್ಯಾಮ್ ಪಿತ್ರೋಡಾ ಅವರನ್ನು ಭೇಟಿ ಮಾಡಿದ್ದೆ. ಅವರು ಬೆಂಗಳೂರು ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ 2-3 ದಿನಗಳ ಕಾಲ ಹಳ್ಳಿ ಬದುಕಿನ ಪ್ರವಾಸ ಆಯೋಜಿಸಬೇಕು. ಆಮೂಲಕ ಅವರಿಗೆ ಹಳ್ಳಿ ಬದುಕಿನ ಪರಿಸ್ಥಿತಿ ಬಗ್ಗೆ ಅರಿವು ಮೂಡಿಸಬೇಕು. ಈ ಬಗ್ಗೆ ನಿಮ್ಮ ಸರ್ಕಾರ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದ್ದರು” ಎಂದು ತಿಳಿಸಿದರು.
“ನಾನು ಆರನೇ ತರಗತಿಯಲ್ಲಿದ್ದಾಗ ನ್ಯಾಷನಲ್ ಸ್ಕೂಲ್ ನಿಂದ ಕಾರ್ಮಲ್ ಶಾಲೆಗೆ ಸೇರಿದೆ. ಆಗ ರೈತ ಮುಖ್ಯನೋ, ಜವಾನ ಮುಖ್ಯನೋ ಎಂಬ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಾನು ರೈತನ ಪರವಾಗಿ ಚರ್ಚೆ ಮಾಡಿ ಪ್ರಥಮ ಸ್ಥಾನ ಪಡೆದೆ. ಅಲ್ಲಿಂದ ನನ್ನ ರಾಜಕಾರಣದ ಪಯಣ ಆರಂಭಿಸಿ ಇಲ್ಲಿಗೆ ಬಂದು ನಿಂತಿದ್ದೇನೆ. ನಾನು ಕೂಡ ರೈತನ ಮಗ. ನಾನು ಖುದ್ದಾಗಿ ವ್ಯವಸಾಯ ಮಾಡದಿದ್ದರೂ ನೂರಾರು ಎಕರೆ ಆಸ್ತಿ ಹೊಂದಿದ್ದೇನೆ. ನಾನು ವಿದ್ಯಾರ್ಥಿಯಾಗಿದ್ದಾಗ ಈ ಕೃಷಿ ಕಾಲೇಜಿಗೆ ಬಂದು ಕೋಳಿ ಸಾಕಾಣೆ ಬಗ್ಗೆ ತರಬೇತಿ ಪಡೆದಿದ್ದೆ” ಎಂದು ತಿಳಿಸಿದರು.
ನಾನು ನಮ್ಮ ಊರಿನಲ್ಲಿ ರೇಷ್ಮೆ ಬೆಳೆಯುತ್ತಿದ್ದೇನೆ. ನನ್ನ ತಮ್ಮ ತಾಲ್ಲೂಕಿನಲ್ಲಿ ರೇಷ್ಮೆ ನೂಲು ಕಾರ್ಖಾನೆ ಆರಂಭಿಸಿದ್ದಾರೆ. ಬೆಂಗಳೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿದ್ದಾರೆ. ನಮ್ಮ ಜಮೀನಿನಲ್ಲಿ ವಿಳ್ಯದೆಲೆ, ಮೆಣಸು ಹಾಕಿದ್ದೇವೆ. ನಮ್ಮ ಮಗನಿಗೂ ಕೃಷಿ ಬಗ್ಗೆ ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡುತ್ತಿದ್ದೇನೆ. ನನ್ನ ಮಗಳು ಕಾಫಿ ಬೆಳೆಗಾರರ ಮನೆಗೆ ಸೇರಿದ್ದಾಳೆ. ನಮ್ಮ ವ್ಯವಹಾರ ಏನೇ ಇದ್ದರೂ ರೈತರ ಕುಟುಂಬದಲ್ಲಿದ್ದೇವೆ. ನಮಗೆ ರೈತರ ಶ್ರಮ ಏನು ಎಂದು ಗೊತ್ತಿದೆ. ರೈತರಿಗೆ ಸಂಬಳ, ಪಿಂಚಣಿ, ಬಡ್ತಿ, ಲಂಚ ಯಾವುದೂ ಇಲ್ಲ ಎಂದು ಹೇಳಿದರು.
ರಾಜಸ್ಥಾನ ಬಿಟ್ಟರೆ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಭೂಮಿ ಇದೆ. ಕೃಷಿಗೆ ಉತ್ತೇಜನ ನೀಡಲು ನಮ್ಮ ಸರ್ಕಾರ ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಪೂರೈಸುತ್ತಿದೆ. ಇದಕ್ಕಾಗಿ ವಾರ್ಷಿಕವಾಗಿ 20 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಕೆರೆಗೆ ನೀರು ತುಂಬಿಸುವ ಯೋಜನೆಯ ವಿದ್ಯುತ್ ಬಿಲ್ ಮೊತ್ತ 3 ಸಾವಿರ ಕೋಟಿ ಕಟ್ಟಬೇಕಿದೆ. ರೈತರಿಗೆ ಅನೇಕ ಸಂಕಟಗಳು ಬರುತ್ತಿರುತ್ತವೆ. ನಾವು ಅದನ್ನು ಸವಾಲಾಗಿ ಸ್ವೀಕರಿಸಿ ಬಗೆಹರಿಸಲು ಮುಂದಾಗುತ್ತೇವೆ. ಕೋಲಾರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಮಾಗಡಿ ಸುತ್ತಮುತ್ತ ತರಕಾರಿ, ರೇಷ್ಮೆ, ಹಾಲು, ಹೂ ಬೆಳೆ ಬೆಳೆಯುತ್ತಿದ್ದಾರೆ. ವಿಮಾನ ನಿಲ್ದಾಣದ ಸಿಇಒಗಳು ನನ್ನನ್ನು ಭೇಟಿ ಮಾಡಲು ಬಂದಾಗ ಬೆಂಗಳೂರಿನಿಂದ ಸುಮಾರು 50 ವಿಮಾನದಷ್ಟು ನಮ್ಮಲ್ಲಿ ಬೆಳೆದ ಹೂ, ಹಣ್ಣು, ತರಕಾರಿಗಳನ್ನು ಹೊರ ಭಾಗಕ್ಕೆ ರಫ್ತು ಮಾಡಲಾಗುತ್ತಿದೆ ಎಂದು ನನಗೆ ಮಾಹಿತಿ ನೀಡಿದರು ಎಂದರು.
ಈ ರೈತ ಸಂತೆ ಕಾರ್ಯಕ್ರಮದಲ್ಲಿ ನನಗೆ ವಿವಿಧ ರೀತಿಯ ತರಕಾರಿ, ತುಪ್ಪ, ಕೃಷಿ ಉತ್ಪನ್ನಗಳನ್ನು ತೋರಿಸುತ್ತಿದ್ದರು. ಒಂದು ಪ್ಯಾಕೆಟ್ ಅಣಬೆಗೆ 50 ರೂ. ಎಂದರು. ಇದೇ ಅಣಬೆಯನ್ನು ಮಾಲ್ ಗಳಲ್ಲಿ 250 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ರೈತನಿಂದ ಮಾರುಕಟ್ಟೆಯಲ್ಲಿ ತಲುಪುವವರೆಗೆ ಕೈ ಬದಲಾಗುವುದರೊಳಗೆ ಬೆಲೆ ಐದು ಪಟ್ಟು ಹೆಚ್ಚಾಗುತ್ತದೆ. ಹೀಗಾಗಿ ನಮ್ಮ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಕೃಷಿ ವಿವಿ ಉಪಕುಲಪತಿಗಳು ಸೇರಿ ರೈತರಿಗೆ ನೆರವಾಗಲು ಈ ರೈತ ಸಂತೆ ಕಾರ್ಯಕ್ರಮ ಮಾಡಿದ್ದಾರೆ. ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ತಿಳಿಸಿದರು.








