ಬೆಂಗಳೂರು : ಡೈವೋರ್ಸ್ ಪ್ರಕರಣಗಳಲ್ಲಿ ಪತ್ನಿ ಮತ್ತು ಮಕ್ಕಳ ಮಾಸಿಕ ಜೀವನಾಂಶ ಪಾವತಿಸಲು ಕೋರಿ ಸಿಆರ್ಪಿಸಿ 125 ಅಡಿಯಲ್ಲಿ ಸಲ್ಲಿಸುವ ಅರ್ಜಿಗಳ ವಿಚಾರಣೆ ನಡೆಸಿ ಆದೇಶಗಳನ್ನು ಹೊರಡಿಸುವ ಸಂದರ್ಭಗಳಲ್ಲಿ ಲುಕ್‌ಔಟ್ ನೋಟಿಸ್ ಜಾರಿ ಮಾಡಲು ಕೌಟುಂಬಿಕ ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕೌಟುಂಬಿಕ ನ್ಯಾಯಾಲಯಕ್ಕೆ ಲುಕ್‌ಔಟ್ ನೋಟಿಸ್ ಜಾರಿ ಮಾಡುವುದಕ್ಕೆ ಅಧಿಕಾರವಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ತಿಳಿಸಿದೆ. ಸುಪ್ರೀಂಕೋರ್ಟ್ನ ಆದೇಶದ ಹೊರತಾಗಿಯೂ ಲುಕ್‌ಔಟ್ ನೋಟಿಸ್ ಮುಂದುವರೆಸುವುದು ಕಾನೂನುಬಾಹಿರವಾಗಿದೆ. ಇದು ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಪೀಠ ಹೇಳಿದೆ.
ಮಾಸಿಕ ಜೀವನಾಂಶ ಪಾವತಿ ಮಾಡದ ಹಿನ್ನೆಲೆಯಲ್ಲಿ, ಕೌಟುಂಬಿಕ ನ್ಯಾಯಾಲಯವು ಜಾರಿ ಮಾಡಿದ್ದ ಲುಕ್‌ಔಟ್ ನೋಟಿಸ್ ಪ್ರಶ್ನಿಸಿ, ಪ್ರಸ್ತುತ ಕುವೈತ್‌ನಲ್ಲಿ ವಾಸವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಮೂಲದ ಮಹಮ್ಮದ್ ಅಜೀಂ ಎಂಬವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನೆಗಂಟ್ಟಿ ಅವರಿದ್ದ ನ್ಯಾಯಪೀಠ, ಸೆಪ್ಟೆಂಬರ್ 22ರಂದು ಈ ಆದೇಶ ನೀಡಿದೆ.
ಅಲ್ಲದೆ, ಯಾವುದೇ ಆರೋಪಿಗಳು ಕ್ರಿಮಿನಲ್ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು ಲುಕ್‌ಔಟ್ ನೋಟಿಸ್ ಜಾರಿ ಮಾಡುವುದಕ್ಕೆ ಕ್ರಿಮಿನಲ್ ಪ್ರಕರಣಗಳಲ್ಲಿ ಅವಕಾಶವಿದೆ. ಅಲ್ಲದೆ, ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಜೀವನಾಂಶ ಪಾವತಿಸದಿದ್ದರೆ, ಅಂತವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಬಂಧನ ವಾರಂಟ್ ಹೊರಡಿಸುವುದು ಮತ್ತು ಸಿವಿಲ್ ಆರೋಪದಲ್ಲಿ ಜೈಲು ಶಿಕ್ಷೆಯ ಮೂಲಕ ಆದೇಶಿಸುವುದಕ್ಕೆ ಅವಕಾಶಗಳಿವೆ. ಆದರೆ, ಲುಕ್‌ಔಟ್ ನೋಟಿಸ್ ಜಾರಿಗೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.








