ಮಂಡ್ಯ : ಗ್ರಾಮೀಣ ಭಾಗದ ಅಭಿವೃದ್ಧಿಗೆ ಸರಕಾರದಿಂದ ಹೆಚ್ಚಿನ ಅನುದಾನ ಪಡೆದು ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಅಭಿವೃದ್ಧಿಗೆ ಬಿಡುಗಡೆಯಾಗುತ್ತಿರುವ ಅನುದಾನದ ಪ್ರತಿ ಪೈಸೆಯನ್ನೂ ಸದುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.
ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಲ್ ದೊಡ್ಡಿ, ಮೇಲದಾಸನದೊಡ್ಡಿ, ಕೊತ್ತಿಪುರ ಹಾಗೂ ಅಣ್ಣಹಳ್ಳಿದೊಡ್ಡಿ ಗ್ರಾಮಗಳಲ್ಲಿ ಅಂದಾಜು 3 ಕೋಟಿ ರೂ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಇಂದಿಗೂ ಸಹ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದಿನ ಜನಪ್ರತಿನಿಧಿಗಳು ಸಾಕಷ್ಟು ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ, ಗ್ರಾಮೀಣ ಭಾಗದ ಎಲ್ಲ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡುವ ಜೊತೆಗೆ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕೆಲವೆಡೆ ಹೊಸ ರಸ್ತೆಗಳ ನಿರ್ಮಾಣ, ಮರು ಡಾಂಬರೀಕರಣ, ದುರಸ್ತಿ ಕಾರ್ಯ ಪೂರ್ಣಗೊಂಡರೆ ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ರಸ್ತೆಗಳ ಸುಧಾರಣೆಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು, ಅಭಿವೃದ್ಧಿಯ ವೇಗ ಇದೇ ರೀತಿಯಿದ್ದರೆ ಶೀಘ್ರದಲ್ಲೆ ಗ್ರಾಮೀಣ ಭಾಗದ ಎಲ್ಲ ರಸ್ತೆಗಳು ಉತ್ತಮ ಸ್ಥಿತಿ ತಲುಪುತ್ತವೆ ಎಂದರು.
ಈಗಾಗಲೇ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿರುವ ಗ್ರಾಮಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದ್ದು, ಇನ್ನು ಕೆಲ ದಿನಗಳಲ್ಲೇ ಕೂಳಗೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 10 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾದರಿ ಗ್ರಾಮಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇನ್ನು, ಬನ್ನಹಳ್ಳಿ ಏತ ನೀರಾವರಿ ಯೋಜನೆಯೂ ಕೂಡ ಅಂತಿಮ ಘಟ್ಟಕ್ಕೆ ತಲುಪಿದ್ದು, ಮುಂದಿನ ಬೇಸಿಗೆ ಬೆಳೆ ವೇಳೆಗೆ 18 ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಬೇಸಾಯಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಎಇಇ ನವೀನ್, ಎಇ ನವೀನ್, ಕೆ.ಬೆಳ್ಳೂರು ಗ್ರಾಪಂ ಅಧ್ಯಕ್ಷ ಕೆಂಪರಾಜು, ಕೆಡಿಪಿ ಸದಸ್ಯ ಸಿದ್ದರಾಜು ಮುಖಂಡರಾದ ಜಯರಾಂ, ತಿಪ್ಪೂರು ಮನು, ಮಹೇಶ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








