ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ನಡೆದ ಗರ್ಭಿಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್ಪಿ ಆದೇಶಿಸಿದ್ದಾರೆ. ಠಾಣೆಯ ವಿಶೇಷ ವಿಭಾಗದ ಕಾನ್‌ಸ್ಟೇಬಲ್ ಸಂಗಮೇಶ ಸಾಗರ ಮತ್ತು ಬೀಟ್ ಕಾನ್‌ಸ್ಟೇಬಲ್ ಚಂದ್ರಕಾಂತ ರಾಥೋಡ ಅಮಾನತಾಗಿರುವ ಪೊಲೀಸ್ ಸಿಬ್ಬಂದಿ.
ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಅನ್ಯಜಾತಿ ಯುವಕನ ಮದುವೆಯಾಗಿದ್ದಕ್ಕೆ ಗರ್ಭಿಣಿ ಮೇಲೆ ಆಕೆಯ ತಂದೆ, ಕುಟುಂಬಸ್ಥರು ಹಲ್ಲೆಗೈದು, ಭೀಕರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಂಗಳವಾರ ತಡರಾತ್ರಿ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಸಪ್ಪ ಸೋಲಾರಾಗೊಪ್ಪ ಮತ್ತು ಅನಿಲಗೌಡ ಪಾಟೀಲ ಎಂಬುವರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಕೊಲೆ ಕೃತ್ಯದ ಸಂಬಂಧ 14ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.








