ಶಿವಮೊಗ್ಗ : ಸಾಗರ ಉಪವಿಭಾಗೀಯ ಕೇಂದ್ರ ಜಿಲ್ಲೆಯಾದರೆ ಮಾತ್ರ ನಮಗೆ ಆಗುತ್ತಿರುವ ಮಲತಾಯಿಧೋರಣೆಯಿಂದ ಮುಕ್ತಿ ಸಿಗುತ್ತದೆ. ಅಭಿವೃದ್ದಿ ಸೇರಿ ಎಲ್ಲ ಹಂತದಲ್ಲಿಯೂ ಸಾಗರವನ್ನು ತೀರ ನಿರ್ಲಕ್ಷ್ಯ ಮಾಡಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಎಂದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಗರ ಮಲೆನಾಡಿನ ಮಲತಾಯಿ ಮಕ್ಕಳು ಎನ್ನುವಂತೆ ನಡೆಸಿಕೊಳ್ಳುತ್ತಿದ್ದಾರೆ. ಸಾಗರ ಉಪವಿಭಾಗೀಯ ಕೇಂದ್ರ ಜಿಲ್ಲೆಯಾದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಸಾಗರ ಜಿಲ್ಲೆ ಮಾಡಿ ಎನ್ನುವ ಹೋರಾಟ ನಾ.ಡಿಸೋಜ, ಕೆ.ವಿ.ಸುಬ್ಬಣ್ಣ ಅವರಿಂದ ಪ್ರಾರಂಭವಾಗಿ ಈಗಿನ ಜಿಲ್ಲಾ ಹೋರಾಟ ಸಮಿತಿ ಅತ್ಯಂತ ವ್ಯವಸ್ಥಿತ ಹೋರಾಟ ರೂಪಿಸಿದೆ. ಕರೂರು ಭಾರಂಗಿ ಹೋಬಳಿ ಜಿಲ್ಲಾ ಕೇಂದ್ರ ಸಂಪರ್ಕಿಸಲು ನೂರಾರು ಕಿ.ಮೀ. ಕ್ರಮಿಸಬೇಕಾಗಿದೆ. ಇದರ ಜೊತೆಗೆ ಮಂಗನಕಾಯಿಲೆಯಂತಹ ಮಾರಕ ರೋಗಬಾಧೆ ನಮ್ಮ ತಾಲ್ಲೂಕನ್ನು ಹೈರಾಣಾಗಿಸಿದೆ. ಸುಸಜ್ಜಿತ ಜಿಲ್ಲಾಸ್ಪತ್ರೆ ಇದ್ದರೆ ಇಂತಹ ಕಾಯಿಲೆಗಳಿಗೆ ಸಂಶೋಧನೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಗಾಗಿ ಹೋರಾಟ ಅನಿವಾರ್ಯವಾಗಿದೆ. ಶಾಸಕರು ತಕ್ಷಣ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಜಿಲ್ಲಾ ಪ್ರಸ್ತಾವನೆ ಕೇಂದ್ರಕ್ಕೆ ಕಳಿಸಲು ಮನವಿ ಮಾಡಬೇಕು. ಇಲ್ಲವಾದಲ್ಲಿ ವಿಧಾನಸೌಧದ ಎದುರು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳು ಮಟ್ಟಿನ ರಜೆ ನೀಡುವ ಮೂಲಕ ಮಹಿಳೆಯರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಇದಕ್ಕೂ ಕೆಲವರು ಟೀಕೆ ಮಾಡಿರುವುದು ಖಂಡನೀಯ. ಹಿಂದೆ ಸಿದ್ದರಾಮಯ್ಯ ಅವರಿಗೆ ಸ್ಯಾನಿಟರಿ ಪ್ಯಾಡ್ ನೀಡುವ ಕಾರ್ಯಕ್ರಮ ಪ್ರಾರಂಭಿಸುವAತೆ ಮನವಿ ಮಾಡಿದಾಗ ಕೆಲವರು ಅಪಹಾಸ್ಯ ಮಾಡಿದ್ದರು. ಆದರೆ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯದ ಕಾಂಗ್ರೇಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳಾ ಪರವಾಗಿದ್ದು, ಶಕ್ತಿಯೋಜನೆ, ಗೃಹಲಕ್ಷ್ಮಿಯಂತಹ ಯೋಜನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ ಎಂದರು.
ಜಲ್ಲಾ ಹೋರಾಟ ಸಮಿತಿಯ ತೀ.ನ.ಶ್ರೀನಿವಾಸ್ ಮಾತನಾಡಿ, ಸಾಗರ ಜಿಲ್ಲೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಸಾಗರ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಉಪಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ಗೋಪಾಲಕೃಷ್ಣಬೇಳೂರು ಮೂಲಕ ಮನವಿ ಸಲ್ಲಿಸಿದೆ. ನಾವು ಶಾಂತಿ ಮತ್ತು ಸಹನೆಯಿಂದ ಪ್ರತಿಭಟನೆ ಮಾಡಿದ್ದೇವೆ. ಇದು ನಮ್ಮ ದೌರ್ಬಲ್ಯವಲ್ಲ. ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಗೋಷ್ಟಿಯಲ್ಲಿ ನಂದಾ ಗೊಜನೂರು, ನಿರ್ಮಲಾ ಗಣೇಶ್, ಪುಷ್ಪಾ ಮಲ್ಲಿಕಾರ್ಜುನ್, ಸುಂದರ ಸಿಂಗ್ ಹಾಜರಿದ್ದರು.








