ಬಳ್ಳಾರಿ : ಬಳ್ಳಾರಿಯಲ್ಲಿ ಇಂದು ಭೀಕರವಾದ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯ ಕಿರು ಸೇತುವೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ದೇವಿನಗರದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಇಂದ್ ಮುಂಜಾನೆ 5 ಗಂಟೆ ಸುಮಾರಿಗೆ ಸಂಭವಿಸಿದೆ.
ಮೃತರನ್ನು ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಪ್ರಸಾದ್ ರಾವ್ (75), ಸಿರುಗುಪ್ಪ ನಿವಾಸಿಗಳಾದ ವಿಜಯ (70) ಹಾಗೂ ಸಂಧ್ಯಾ (35) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ನಿಟ್ಟೂರು ಗ್ರಾಮದ ಪದ್ಮ (70) ಹಾಗೂ ಸಿರುಗುಪ್ಪದ ಬ್ರಹೇಶ್ವರರಾವ್ (45) ಅವರನ್ನು ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದಂತೆ ಒಂದೇ ಕುಟುಂಬದ ಐವರು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ ಹಿಂತಿರುಗಿ ಬರುವಾಗ ಅಪಘಾತ ಸಂಭವಿಸಿದೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದರು. ಚಾಲಕ ನಿದ್ದೆ ಮಂಪರಿನಲ್ಲಿ ಚಾಲನೆ ಮಾಡಿರುವುದು ಹಾಗೂ ಮಂಜುಗಟ್ಟಿದ ವಾತಾವರಣದ ಹಿನ್ನೆಲೆಯಲ್ಲಿ ರಸ್ತೆ ಕಾಣದೇ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.








