ಬೆಂಗಳೂರು : ಮತಕಳ್ಳತನ ಕುರಿತಾಗಿ ಹೇಳಿಕೆ ನೀಡಿ ಸಚಿವ ಸ್ಥಾನದಿಂದ ವಜಾಗೊಂಡಿರುವ ಕೆ ಎನ್ ರಾಜಣ್ಣ ಅವರು ರಾಹುಲ್ ಗಾಂಧಿ ಅವರಿಗೆ ಸುದೀರ್ಘ ಪತ್ರಬರೆದಿದ್ದಾರೆ. ಪತ್ರದಲ್ಲಿ, ನಾನು ಈ ಪತ್ರ ಬರೆದ ಉದ್ದೇಶ ಇಷ್ಟೇ. ನನ್ನ ವಿರುದ್ದ ತಮಗೆ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಆಗಬೇಕು. ನನ್ನ ಹೇಳಿಕೆಯ ಉದ್ದೇಶವನ್ನ ತಮಗೆ ತಪ್ಪಾಗಿ ಅರ್ಥೈಸುವಂತೆ ಮಾಡಿದವರ ಮೇಲೆ ಕ್ರಮ ಆಗಬೇಕು. ಜೊತೆಗೆ ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸಲು ತಮ್ಮ ಭೇಟಿಗೆ ಅವಕಾಶ ನೀಡಿ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ರಾಹುಲ್ ಗಾಂಧಿ ಬಳಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ, ನಾನು ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಹಕಾರ ಸಚಿವ ಹಾಗೂ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದೆ. ನನ್ನನ್ನು ಸಂಪುಟದಿಂದ ವಜಾ ಮಾಡಿರುವ ಸಂಬಂಧ ನಾನು ಕೆಲ ಸತ್ಯಾಂಶಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಮತಗಳ್ಳತನ ಅಭಿಯಾನಕ್ಕೆ ನಾನು ಮನಸಾರೆ ಬೆಂಬಲ ವ್ಯಕ್ತಪಡಿಸಿದ್ದೆ. ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ನಡೆಸಿದ ಪ್ರತಿಭಟನಾ ರ‍್ಯಾಲಿಯಲ್ಲಿ ನಾನೂ ಪಾಲ್ಗೊಂಡು ನನ್ನ ಸಂಪೂರ್ಣ ಬೆಂಬಲ ಸೂಚಿಸಿದ್ದೆ. ಈ ವಿಚಾರವಾಗಿ ನಿಮ್ಮ ಹೋರಾಟವನ್ನು ಹಾಗೂ ನಿಮ್ಮ ನಾಯಕತ್ವವನ್ನು ನಾನು ಬೆಂಬಲ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿಗೆ ನ.17ರಂದು ಕೆ.ಎನ್.ರಾಜಣ್ಣ ಈ ಪತ್ರ ಬರೆದಿದ್ದಾರೆ. ಪವರ್ ಫೈಟ್ ಮಧ್ಯೆ, ಡಿಸಿಎಂ ಡಿಕೆಶಿ ಮತ್ತು ಕೆ.ಎನ್.ರಾಜಣ್ಣ ಪರಸ್ಪರ ಎರಡು ಬಾರಿ ಭೇಟಿ ಮಧ್ಯೆ ಈ ಪತ್ರ ಇದೀಗ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಪತ್ರದಲ್ಲಿ ಅಂದು ಮತಗಳ್ಳತನ ಬಗ್ಗೆ ತಾವು ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ವಿವರವನ್ನು ಲಗತ್ತಿಸಿದ್ದಾರೆ. ಕನ್ನಡದ ಹೇಳಿಕೆ ಮತ್ತು ಅದರ ಇಂಗ್ಲಿಷ್ ತರ್ಜುಮೆಯನ್ನು ಲಗತ್ತಿಸಿದ್ದಾರೆ.ಈಗಾಗಲೇ ನಾಲ್ಕು ಪತ್ರಗಳನ್ನು ರಾಹುಲ್ ಗಾಂಧಿಗೆ ರವಾನಿಸಿರುವ ಕೆ ಎನ್ ರಾಜಣ್ಣ ಸಿಎಂ ಸಿದ್ದರಾಮಯ್ಯ ಪರವಾಗಿಯೂ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಸಿದ್ದರಾಮಯ್ಯರನ್ನು ಪಾರ್ಟಿ ಕೈ ಬಿಟ್ಟರೆ ಆಗುವ ಡ್ಯಾಮೇಜ್ ಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಇತರ ರಾಜ್ಯಗಳಲ್ಲಿ ಈ ರೀತಿಯ ಲೋಪಗಳನ್ನು ತಪ್ಪಿಸಬಹುದಿತ್ತು. ಆ ಮೂಲಕ 30-40 ಸ್ಥಾನಗಳನ್ನು ಹೆಚ್ಚಿಗೆ ಗೆಲ್ಲಬಹುದಿತ್ತು. ಆಗ ನರೇಂದ್ರ ಮೋದಿ ಪ್ರಧಾನಿಯಾಗುತ್ತಿರಲಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುತ್ತಿತ್ತು, ರಾಹುಲ್ ಗಾಂಧಿ ಪ್ರಧಾನಿಯಾಗುತ್ತಿದ್ದರು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಗೊಂದಲ ವಿಚಾರವಾಗಿಯೂ ಅವರು ಪತ್ರದಲ್ಲಿ ಕೆಲವು ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ರಾಜ್ಯದ ವಿದ್ಯಮಾನಗಳಿಂದ ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್ ಬಗ್ಗೆ ರಾಜಣ್ಣ ಪತ್ರದಲ್ಲಿ ಮಾಹಿತಿಯನ್ನು ನೀಡಿದ್ದಾರೆ. ತಮ್ಮ ಸಚಿವ ಸ್ಥಾನ ವಂಚನೆಗೆ ಕಾರಣರು ಯಾರು ಎಂಬ ಬಗ್ಗೆಯೂ ಸುದೀರ್ಘ ವಿವರಣೆಯನ್ನು ನೀಡಿದ್ದಾರೆ.








