ಶಿವಮೊಗ್ಗ: ಡಿ.25ರಿಂದ 27ರವರೆಗೆ ಅಯ್ಯಪ್ಪಸ್ವಾಮಿ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಸಾಗರದ ಅಯ್ಯಪ್ಪಸ್ವಾಮಿ ದೀಪೋತ್ಸವ ಅಂಗವಾಗಿ ಮೊದಲ ಬಾರಿಗೆ ಡಿ. 25 ರಿಂದ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಆರ್. ಚಂದ್ರು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿ. 25ರಂದು ಬೆಳಿಗ್ಗೆ 8 ಗಂಟೆಗೆ ಪಿ.ಆರ್.ರವೀಂದ್ರನ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದರು.
ಸoಜೆ 5.30ಕ್ಕೆ ಮಾಲೆಧರಿಸಿದ ಸ್ವಾಮಿಗಳಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ನಡೆಯುವ ರಾಜಬೀದಿ ಮೆರವಣಿಗೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಲಿದ್ದು, ರಾಜು ಗುರುಸ್ವಾಮಿ ನೇತೃತ್ವ ವಹಿಸಲಿದ್ದಾರೆ. ಸಂಜೆ 6ಕ್ಕೆ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮಹಾಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರoಗ ಉಪಸ್ಥಿತರಿರುವರು ಎಂದು ಹೇಳಿದರು.
ಡಿ.26ರಂದು ಸಂಜೆ ೫ಕ್ಕೆ ಅಯ್ಯಪ್ಪಸ್ವಾಮಿ ದೇವಾಲಯ ನವ ನಿರ್ಮಾಣ ಕಾರ್ಯಯೋಜನೆ ಉದ್ಘಾಟನೆ ನಡೆಯಲಿದ್ದು ಸಂಸದ ಬಿ.ವೈ.ರಾಘವೇಂದ್ರ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಗೋಪಾಲಕೃಷ್ಣ ಬೇಳೂರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮೋಹನ್ ಆಳ್ವ ಉಪಸ್ಥಿತರಿದ್ದರು ಆರ್. ಚಂದ್ರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ದಿನ ಸಂಜೆ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಡಿ.27ರಂದು ಬೆಳಿಗ್ಗೆ 8ಕ್ಕೆ ಗಣಹೋಮ ನಡೆಯಲಿದ್ದು, ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ನಡೆಯುವ ಅನ್ನ ಸಂತರ್ಪಣೆಯನ್ನು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ಎಸ್.ರಾಮಪ್ಪ ಚಾಲನೆ ನೀಡುವರು. ಮೂರು ದಿನದ ಕಾರ್ಯಕ್ರಮಕ್ಕೆ ಅತಿಹೆಚ್ಚಿನ ಭಕ್ತಾದಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಈ ಸುದ್ದಿಗೋಷ್ಟಿ ಉದ್ದೇಶಿಸಿ ರಾಜು ಗುರುಸ್ವಾಮಿ ಸುನೀಲ್ ಕುಮಾರ್ ಮಾತನಾಡಿದರು. ಪ್ರಸಾದ್, ಜೀನೇಶ್, ಸಿಬಿನ್ ಸೋಮನ್, ಮನೋಜ್, ಮೌನೇಶ್ ಇನ್ನಿತರರು ಹಾಜರಿದ್ದರು.
ನಾಳೆ ಸಾಗರದ ‘ಸರ್ಕಾರಿ ಪದವಿ ಪೂರ್ವ ಕಾಲೇಜು ಸುವರ್ಣ ಮಹೋತ್ಸವ’: ಸಿದ್ಧತೆ ಪರಿಶೀಲಿಸಿದ ಶಾಸಕರು








