ಬೆಳಗಾವಿ : ಚಿಕ್ಕೋಡಿ ಜಿಲ್ಲೆಯಾಗಲು ಬಹಳ ದಿನವಿಲ್ಲ. ಮುಂದಿನ ಹೆಜ್ಜೆಗಳನ್ನಿಡಲು ಬೇಗ ಪ್ರಕ್ರಿಯೆ ಆರಂಭ ಆಗಬಹುದು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಚಿಕ್ಕೋಡಿ ನ್ಯಾಯಾಲಯದ ನೂತನ ಕಟ್ಟಡ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಕುರಿತಾಗಿ ಸಿಎಂ ಸಿದ್ದರಾಮಯ್ಯನವರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ ಮಾಡಿದ್ದಾರೆ. ಸಚಿವರೂ ಕೂಡ ಚಿಕ್ಕೋಡಿ, ಬೆಳಗಾವಿ, ಗೋಕಾಕ್ ಜನರೊಂದಿಗೆ ಸಭೆ ನಡೆಸಿದ್ದಾರೆ ಎಂದರು. 800 ವರ್ಷಗಳ ಇತಿಹಾಸ ಇರುವ ಚಿಕ್ಕೋಡಿ ನ್ಯಾಯಾಲಯದ ಹೊಸ ಕಟ್ಟಡ ಉದ್ಘಾಟನೆ ಬಹಳ ಸಂತೋಷ ತಂದಿದೆ ಎಂದರು.
ಈ ನ್ಯಾಯಾಲಯಕ್ಕೆ ಅಂಬೇಡ್ಕರ್ ಕೂಡ ಬಂದಿದ್ದರು. ಅವರು ನ್ಯಾಯಕ್ಕಾಗಿ ಹೋರಾಟ ಮಾಡಿರುವ ಇತಿಹಾಸ ಕೇಳಿದ್ದೇವೆ. ಈ ನ್ಯಾಯಾಲಯದ ಬಾರ್ ರಾಜ್ಯಕ್ಕೆ ಬಹು ದೊಡ್ಡ ಕೊಡುಗೆ ಕೊಟ್ಟಿದೆ. ವಿಧಾನಸಭೆ ಸ್ಪೀಕರ್ ಕಟಾವಳಿ ಹೆಸರು ನೆನಪಿಗೆ ಬರುತ್ತದೆ ಎಂದು ಇತಿಹಾಸ ಮೆಲುಕು ಹಾಕಿದರು.








