ವಿಜಯಪುರ: `ಊರು ಉಪಕಾರ ಬಲ್ಲದೇ, ಹೆಣ ಶೃಂಗಾರ ಬಲ್ಲದೇ?’ ಎನ್ನುವುದೊಂದು ಗಾದೆಮಾತು. `ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎನ್ನುವುದು ಇನ್ನೊಂದು ಲೋಕೋಕ್ತಿ. ಆದರೆ, ಗಾದೆ ಕೂಡ ಒಮ್ಮೊಮ್ಮೆ ಸುಳ್ಳಾಗುತ್ತದೆ. ಇದಕ್ಕೆ ಭಾನುವಾರ ಇಲ್ಲಿ ನಡೆದ ಒಂದು ಅಪರೂಪದ ಕಾರ್ಯಕ್ರಮವೇ ಸಾಕ್ಷಿ. ಕೃತಜ್ಞತೆಯ ರೂಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲರಿಗೆ ರೈತಬಂಧುಗಳು ಸಮರ್ಪಿಸಿದ ತುಲಾಭಾರ ಇದಕ್ಕೆ ಕಾರಣವಷ್ಟೆ!
ಇಂತಹ ಚಂದದ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿದ್ದು, ಇಲ್ಲಿನ ಸಾತಲಿಂಗಯ್ಯ ಶಂಕರಯ್ಯ ಹಿರೇಮಠ ಅವರ ತೋಟದಲ್ಲಿ ಏರ್ಪಡಿಸಿದ್ದ ರೈತ ಕ್ಷೇತೋತ್ಸವ. ಇದರ ಸಾನ್ನಿಧ್ಯ ವಹಿಸಿದ್ದು ಇಲ್ಲಿನ ಹಿರೇಮಠದ ಶಿವಬಸವ ಶಿವಾಚಾರ್ಯ ಶ್ರೀಗಳು. ಇದನ್ನು ಆಯೋಜಿಸಿದ್ದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಿಕೋಟಾ ತಾಲ್ಲೂಕು ಘಟಕ. ಬೋಧನೆಗಿಂತ ಪಾಲನೆಗೆ ಯಾವತ್ತೂ ಕಿಮ್ಮತ್ತು ಜಾಸ್ತಿ!
ಎಂ ಬಿ ಪಾಟೀಲರು ಹಿಂದೆ 2013-18ರಲ್ಲಿ ಜಲಸಂಪನ್ಮೂಲ ಸಚಿವರಾಗಿ ತಿಕೋಟಾ ಪ್ರದೇಶಕ್ಕೆ ನೀಡಿರುವ ಕೊಡುಗೆ ಅಮೂಲ್ಯ. ಅವರ ಆಸಕ್ತಿಯಿಂದಾಗಿ ರೈತರ ಬಾಳು ಹಸನಾಗಿದೆ; ಒಂದು ಕಾಲದ ಬರಡು ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ; ಒಕ್ಕಲು ಭೂಮಿಯಲ್ಲಿ ಪಪ್ಪಾಯಿ, ಪೇರಲೆ, ಕಬ್ಬು, ತರಕಾರಿ, ಅಡಿಕೆ, ಬಾಳೆ ನಳನಳಿಸುತ್ತಿವೆ. ಈಗಲೂ ಅವರ ಪ್ರಯತ್ನಗಳಿಂದಾಗಿ ಹಲವು ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಅವು ನಾಳೆ ಮತ್ತಷ್ಟು ಸಮೃದ್ಧಿಯನ್ನು ತಂದುಕೊಡಲಿವೆ.
ಇದನ್ನು ಇಲ್ಲಿನ ರೈತರು ಕೂಡ ಮರೆತಿಲ್ಲ. ಹೀಗಾಗಿ, ಎಂ ಬಿ ಪಾಟೀಲರನ್ನು ಆಹ್ವಾನಿಸಿ, ತಾವು ಬೆಳೆದ ಮೇಲ್ಕಂಡ ಬೆಳೆಗಳಿಂದಲೇ ಪ್ರೀತಿಯ ತುಲಾಭಾರ ನೆರವೇರಿಸಿಯೇ ಬಿಟ್ಟರು! ಇದನ್ನು ಕಂಡ ಸಚಿವರು, ಮೂಕವಿಸ್ಮಿತರಾದರು. ಅಂತಃಕರಣದ ಪ್ರೀತಿಯ ಮುಂದೆ ಉಳಿದವು ನಗಣ್ಯವಲ್ಲವೇ? ತಿಕೋಟಾದ ರೈತ ಕ್ಷೇತ್ರೋತ್ಸವ ಇದಕ್ಕೆ ನಿದರ್ಶನವಾಯಿತು.
ತುಲಾಭಾರ ಸ್ವೀಕರಿಸಿ ಮಾತನಾಡಿದ ಎಂ ಬಿ ಪಾಟೀಲರು, `ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನೀರಾವರಿ ಸೌಲಭ್ಯದಿಂದ ಮಾತ್ರ ಸಾಧ್ಯ. ನನಗೆ ದೊರೆತ ಅವಕಾಶದಲ್ಲಿ ಕೈಲಾದಷ್ಟು ಇದನ್ನು ತವರು ಜಿಲ್ಲೆಯ ಜನರಿಗೆ ಮಾಡಿದ್ದೇನೆ. ಹಿಂದೆ ನೀರಾವರಿ ಸಚಿವನಾಗಿದ್ದಾಗ ನಡೆಸಿದ ಕಾನೂನು ಸಮರಗಳು ಮತ್ತು ಹೊರಬಂದ ತೀರ್ಪುಗಳದೇ ಒಂದು ದೊಡ್ಡ ಗ್ರಂಥವಾಗುತ್ತವೆ. ಶಾಸಕನಾಗಿ, ಸಚಿವನಾಗಿ ನನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಆತ್ಮಸಂತೃಪ್ತಿ ನನ್ನದಾಗಿದೆ’ ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು. ಜೊತೆಗೆ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬರಲಿರುವ ನೀರಾವರಿ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು. ಮಿಗಿಲಾಗಿ, ಕಬ್ಬು ಬೆಳೆಗಾರರಿಗೆ ವಿಶೇಷ ತಜ್ಞರಿಂದ ಮಾರ್ಗದರ್ಶನ, ಕೃಷಿ ಕುರಿತ ಉಪನ್ಯಾಸಗಳೂ ನಡೆದವು.
ಕಾರ್ಯಕ್ರಮದಲ್ಲಿ ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಗುಣದಾಳು ಹಿರೇಮಠದ ಡಾ.ವಿವೇಕಾನಂದ ದೇವರು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ, ಸ್ಥಳೀಯ ಜನಪ್ರತಿನಿಧಿಗಳು ಇದ್ದರು. ಜೊತೆಗೆ ಸಾವಿರಾರು ರೈತರು ಮತ್ತು ಮಹಿಳೆಯರ ಸಂಭ್ರಮದ ಕಲರವವೂ ಇತ್ತು.
5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ: ಶಾಸಕ ಗೋಪಾಲಕೃಷ್ಣ ಬೇಳೂರು
‘ಸಾಗರ ಜಿಲ್ಲೆ’ ಮಾಡೋದಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಒತ್ತಾಯ








