ಗದಗ: ರಾಜ್ಯ ಸರ್ಕಾರ ಎಲ್ಲ ರಂಗದಲ್ಲಿಯೂ ವಿಫಲವಾಗಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಅದರ ವಿರುದ್ಧ ಮಾತನಾಡದಂತೆ ವಿರೋಧ ಪಕ್ಷ, ರೈತರು, ಜನ ಸಾಮಾನ್ಯರನ್ನು ದಮನ ಮಾಡಲು ವ್ಯಕ್ತಿಯ ಸ್ವಾತಂತ್ರ್ಯ ಹರಣ ಮಾಡಲು ಸಂವಿಧಾನ ವಿರುದ್ಧ ದ್ವೇಷ ಭಾಷಣ ನಿಯಂತ್ರಣ ಕಾನೂನು ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. ಯಾವ ಇಲಾಖೆಯಲ್ಲಿಯೂ ಕೆಲಸ ಆಗುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಜನರು ಇದನ್ನು ವಿರೋಧ ಮಾಡಬಾರದು ಎಂದು ದ್ವೇಷ ಭಾಷಣದ ವಿರುದ್ಧ ಕಾನೂನು ಮಾಡಿದ್ದಾರೆ. ಕಾಂಗ್ರೆಸ್ ನವರೇ ಹೆಚ್ಚು ದ್ವೇಷ ಭಾಷಣ ಮಾಡಿದ್ದಾರೆ. ಈಗಾಗಲೇ ದ್ವೇಷ ಭಾಷಣ ಮಾಡುವುದನ್ನು ನಿಯಂತ್ರಿಸಲು ಬಿಎನ್‌ಎಸ್ ಕಾನೂನಿದೆ. ಇವರು ವಿರೋಧ ಪಕ್ಷ, ರೈತರನ್ನು, ಜನ ಸಾಮಾನ್ಯರನ್ನು ದಮನ ಮಾಡಲು ವ್ಯಕ್ತಿಯ ಸ್ವಾತಂತ್ರ್ಯ ಹರಣ ಮಾಡಲು ಸಂವಿಧಾನದ ವಿರುದ್ಧ ಈ ಕಾನೂನು ತಂದಿದ್ದಾರೆ ಎಂದು ಹೇಳಿದರು.
ಜಿ. ರಾಮ್ ಜಿ ವಿಧೇಯಕವನ್ನು ಕಾಂಗ್ರೆಸ್ ವಿರೋಧಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿ ರಾಮ್ ಜಿ ವಿಧೇಯಕದ ಬಗ್ಗೆ ಸಂಸತ್ತಿನಲ್ಲಿ ಸುಮಾರು ಹದಿನೈದು ಗಂಟೆಗಳಿಗಿಂತ ಸುದೀರ್ಘವಾಗಿ ಚರ್ಚೆಯಾಗಿದೆ. ಪ್ರಮುಖವಾಗಿ ಹದಿನೈದು ಇಪ್ಪತ್ತು ವರ್ಷದಿಂದ ಇದ್ದ ಕಾನೂನು ಇವತ್ತಿನ ಗ್ರಾಮೀಣ ಪರಿಸ್ಥಿತಿ ಬಹಳ ಬದಲಾಗಿದೆ. ಅದರ ಅನುಗುಣವಾಗಿ ಬದಲಾವಣೆ ಮಾಡಾಲಾಗಿದೆ. ಭ್ರಷ್ಟಾಚಾರ ಹೆಚ್ಚಾಗಿತ್ತು. ಯೋಜನೆ ದುರುಪಯೋಗ ಆಗುತ್ತಿರುವ ಆರೋಪ ಇತ್ತು. ತಾಂತ್ರಿಕವಾಗಿ ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಸೋರಿಕೆ ತಡೆಯಲಾಗಿದೆ. ಆಸ್ತಿ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಈ ಯೋಜನೆ ಬಳಕೆ ಆಗಬೇಕೆಂದು ಬದಲಾವಣೆ ತಂದಿದ್ದಾರೆ. ಪ್ರತಿ ವರ್ಷ ಒಂದು ಲಕ್ಷ ಹನ್ನೊಂದು ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅದು ಒಳ್ಳೆಯ ಉದ್ದೇಶಕ್ಕೆ ಆಗಬೇಕು. ಬಹಳಷ್ಟು ರಾಜ್ಯಗಳಲ್ಲಿ ದುರುಪಯೋಗ ಆಗುತ್ತಿತ್ತು. ನೋಂದಣಿ ಅಥವಾ ಉದ್ಯೋಗದ ದಿನಗಳನ್ನು ಕಡಿಮೆ ಮಾಡಿಲ್ಲ. 25 ದಿನ ಹೆಚ್ಚಿಗೆ ಮಾಡಲಾಗಿದೆ. ಆದ್ದರಿಂದ ಇದೊಂದು ಪ್ರಗತಿಪರವಾಗಿದೆ. ವಿರೋಧ ಪಕ್ಷಗಳು ಇದನ್ನು ವಿರೋಧ ಮಾಡಲು ವಿರೋಧಿಸುತ್ತಿವೆ ಎಂದು ಹೇಳಿದರು.
ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆ ಹತ್ತಿಕ್ಕಲು ಈ ವಿಧೇಯಕ ತರಲಾಗಿದೆ ಎಂಬ ಕಾಂಗ್ರೆಸ್ ನವರ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಮನ ಹೆಸರು ತೆಗೆದುಕೊಂಡಾಗ ಅದರಲ್ಲಿ ಗಾಂಧೀಜಿ ಇದ್ದಾರೆ. ಗಾಂಧಿ ರಾಮರಾಜ್ಯ, ಗಾಮ ರಾಜ್ಯದ ಬಗ್ಗೆ ಮಾತನಾಡಿದ್ದಾರೆ. ರಾಮನನ್ನು ಗಾಂಧೀಜಿಯಿಂದ ಬೇರ್ಪಡಿಸುವುದೇ ಗಾಂಧಿಜಿಗೆ ಮಾಡುವ ದೊಡ್ಡ ಅಪಚಾರ ಎಂದು ಹೇಳಿದರು.
ರೈತರಿಗೆ ಮೋಸ
ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಮಾಡದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಇದನ್ನು ಮೊದಲೇ ಹೇಳಿದ್ದೆ. ಯಾವುದೇ ಏಜೆನ್ಸಿ ನಿಗದಿ ಮಾಡಿರಲಿಲ್ಲ. ಅವರೇ ಹತ್ತು ಲಕ್ಷ ಮೆಟ್ರಿಕ್ ಟನ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಎಷ್ಟು ಮೆಟ್ರಿಕ್ ಟನ್ ಖರೀದಿ ಮಾಡಿದ್ದಾರೆ ಎಂದು ಸರ್ಕಾರ ಬಹಿರಂಗ ಪಡಿಸಲಿ. ಎಲ್ಲೆಲ್ಲೂ ಕೂಡ ಖರೀದಿ ಆಗುತ್ತಿಲ್ಲ. ಎಂಟತ್ತು ಕ್ವಿಂಟಲ್ ಖರೀದಿಸಿ ನಿಲ್ಲಿಸುತ್ತಾರೆ. ಮೆಕ್ಕೆಜೋಳ ಬೆಳೆಯುವ ರೈತರಿಗೆ ಸರ್ಕಾರ ಮೋಸ ಮಾಡಿದೆ ಎಂದು ದೂರಿದರು.
ಯಲವಿಗಿ ಗದಗ ರೈಲ್ವೆ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಹೇಳಿದ್ದೇನೆ. ಡಿಪಿಆರ್ ಸಿದ್ಧವಾಗಿದೆ. ರೈಲ್ವೆ ಬೋರ್ಡ್‌ಗೆ ಒಪ್ಪಿಗೆಗೆ ಹೋಗುತ್ತದೆ. ರಾಜ್ಯ ಸರ್ಕಾರ ಅದನ್ನು ಕಳಿಸಬೇಕು. ಅಲ್ಲಿಂದ ಒಪ್ಪಿಗೆ ಬಂದ ನಂತರ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುತ್ತದೆ. ಶೇ 80 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿದ ಮೇಲೆ ಕಾರ್ಯಾರಂಭ ಆಗಲಿದೆ ಎಂದು ಹೇಳಿದರು.
ಸೊರಬದ ಉಳವಿಯಲ್ಲಿ ನೂತನ KSRTC ಬಸ್ ನಿಲ್ದಾಣ, ಆಸ್ಪತ್ರೆ ಕ್ವಾಟ್ರಾಸ್ ನಿರ್ಮಾಣ: ಸಚಿವ ಮಧು ಬಂಗಾರಪ್ಪ
ಬೆಂಗಳೂರು ಜನತೆ ಗಮನಕ್ಕೆ: ಡಿ.23ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut








