ಬೆಂಗಳೂರು: ಕ್ರೀಡಾ ಮೀಸಲಾತಿಯಡಿ ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದಂತ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಗುಡ್ ನ್ಯೂಸ್ ನೀಡಿದ್ದಾರೆ. ಅದೇ ಜನವರಿ 2026 ರಲ್ಲಿ ನೇಮಕಾತಿ ಆದೇಶ ಪತ್ರ ನೀಡುವುದಾಗಿ ತಿಳಿಸಿದ್ದಾರೆ.
ಅವರು ಇಂದು ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಬೆಂಗಳೂರು ಇವರ ವತಿಯಿಂದ ಕರ್ನಾಟಕ ಒಲಂಪಿಕ್ 2025 ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ವತಿಯಿಂದ ನೀಡಲಾಗುತ್ತಿರುವ ಕರ್ನಾಟಕ ಒಲಂಪಿಕ್ 2025 ಪ್ರಶಸ್ತಿಗೆ ಭಾಜನರಾಗಿರುವ ಕ್ರೀಡಾ ಸಾಧಕರಿಗೆ ಅಭಿನಂದಿಸಿದ ಮುಖ್ಯಮಂತ್ರಿಗಳು, 1958 ರಲ್ಲಿ ಪ್ರಾರಂಭವಾದ ಒಲಂಪಿಕ್ಸ್ ಸಂಸ್ಥೆ ಇಲ್ಲಿಯವರೆಗೆ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾ ಬಂದಿದೆ. ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜ್ ಅವರು ಸಂಸ್ಥೆಯ ಅಧ್ಯಕ್ಷತೆ ವಹಿಸಿಕೊಂಡ ನಂತರ ಸಂಸ್ಥೆಯು ಹೆಚ್ಚು ಕ್ರಿಯಾಶೀಲವಾಗಿದೆ. ನನ್ನ ಅವಧಿಯಲ್ಲಿಯೇ ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನೂ ನಾನೇ ನೆರವೇರಿಸಿದ್ದೇನೆ. ಇಡೀ ದೇಶದಲ್ಲಿಯೇ ಆಂಧ್ರ ಮತ್ತು ಕೇರಳ ರಾಜ್ಯದಂತೆ ಕರ್ನಾಟಕದಲ್ಲಿಯೂ ಸಂಸ್ಥೆಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯು ಎಲ್ಲಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಕ್ರೀಡಾಪಟುಗಳಿಗೆ ಸರ್ಕಾರದ ನೇಮಕಾತಿಯಲ್ಲಿಯೂ ಮೀಸಲಾತಿಯನ್ನು ಒದಗಿಸಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಶೇ. 3 ರಷ್ಟು ಹಾಗೂ ಇನ್ನುಳಿದ ಇಲಾಖೆಗಳಲ್ಲಿ ಶೇ. 2 ರಷ್ಟು ಕ್ರೀಡಾಪಟುಗಳಿಗೆ ಮೀಸಲಾತಿ ನೀಡಲಾಗುವುದು. ಜನವರಿಯಲ್ಲಿ ಕ್ರೀಡಾಮೀಸಲಾತಿಯಡಿಯಲ್ಲಿ ಸರ್ಕಾರಿ ಉದ್ಯೋಗದ ನೇಮಕಾತಿಗೆ ಸರ್ಕಾರಿ ಆದೇಶವನ್ನು ಹೊರಡಿಸಲಾಗುತ್ತದೆ. ಆದ್ದರಿಂದ ಹೆಚ್ಚಿನ ಯುವಜನರು ಕ್ರೀಡಾ ಕ್ಷೇತ್ರದಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು.








