ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ವು ಡಿಸೆಂಬರ್ 21 ರಿಂದ ಡಿಸೆಂಬರ್ 24, 2025ರ ವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ – 2025ನ್ನು ಆರಂಭಿಸುತ್ತಿದೆ.
ಆರೋಗ್ಯವೇ ಭಾಗ್ಯ; ಆರೋಗ್ಯವಂತ ಮಕ್ಕಳು ರಾಷ್ಟ್ರದ ಆಸ್ತಿಯಾಗಿದೆ. ಪೋಲಿಯೋ ರೋಗವು ಸಾಮಾನ್ಯವಾಗಿ ಐದು ವರ್ಷದೊಳಗಿನ ಮಕ್ಕಳನ್ನು ಹೆಚ್ಚಾಗಿ ಪರಿಣಾಮಗೊಳಿಸುತ್ತದೆ. ಭಾರತದಲ್ಲಿ 2011 ರಿಂದ ಯಾವುದೇ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ. 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಿದೆ. ಆದರೆ ಪಕ್ಕದ ದೇಶಗಳಾದ ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ಕಂಡುಬರುತ್ತಿರುವುದರಿಂದ, ನಮ್ಮ ಮಕ್ಕಳನ್ನು ಪಲ್ಸ್ ಪೋಲಿಯೋ ಲಸಿಕೆ ಹನಿಗಳ ಮೂಲಕ ರಕ್ಷಿಸುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಾರ್ವಜನಿಕ ಆರೋಗ್ಯ ಇಲಾಖೆಯ ಮೂಲಕ, ಎಲ್ಲಾ ವಾರ್ಡ್‌ಗಳಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ – 2025ನ್ನು ಯಶಸ್ವಿಯಾಗಿ ನಡೆಸಲು ಅಗತ್ಯವಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ನವೀನ ಚಿಂತನೆಯ ಭಾಗವಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಮೀಪದ ಪಲ್ಸ್ ಪೋಲಿಯೋ ಲಸಿಕೆ ಕೇಂದ್ರವನ್ನು ಪತ್ತೆಹಚ್ಚಲು ಸಹಾಯಕವಾಗುವ QR ಕೋಡ್ ವ್ಯವಸ್ಥೆಯನ್ನು ಪರಿಚಯಿಸಿದೆ. ಈ QR ಕೋಡ್ ಅನ್ನು GBA ವೆಬ್‌ಸೈಟ್‌ನಲ್ಲಿ https://gba.karnataka.gov.in/polio/ ಅಪ್ ಲೋಡ್ ಮಾಡಲಾಗಿದ್ದು, ಪೋಷಕರು ಮತ್ತು ಪಾಲಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಹತ್ತಿರದ ಕೇಂದ್ರವನ್ನು ಸುಲಭವಾಗಿ ಪತ್ತೆಹಚ್ಚಲು ಸಹಕಾರಿಯಾಗಲಿದೆ.
ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವು 21-12-2025 ರಿಂದ 24-12-2025 ರವರೆಗೆ ನಡೆಯಲಿದ್ದು, ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಎರಡು ಹನಿ ಪಲ್ಸ್ ಪೋಲಿಯೋ ಲಸಿಕೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಯೋಜನಾ ಘಟಕಗಳು (UPHCಗಳು) ರೋಟರಿ ಕ್ಲಬ್, ಲಯನ್ಸ್ ಕ್ಲಬ್, WHO, ಯುನಿಸೆಫ್, UNDP ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳ (NGO) ಸಹಕಾರದಿಂದ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ – 2025ಗಾಗಿ 145 ಯೋಜನಾ ಘಟಕಗಳಿಗೆ ಕಾರ್ಯಯೋಜನೆಯನ್ನು ರೂಪಿಸಲಾಗಿದೆ, ವಿವರಗಳು ಈ ಕೆಳಕಂಡಂತಿವೆ:
• ಒಟ್ಟು ಮನೆಗಳು: 28,38,822
• 0–5 ವರ್ಷದ ಮಕ್ಕಳ ಸಂಖ್ಯೆ : 11,34,588
• ಒಟ್ಟು ಲಸಿಕೆ ಕೇಂದ್ರಗಳು (ಬೂತ್‌ಗಳು) : 4,452
• ಸ್ಥಿರ ಬೂತ್‌ಗಳು : 3,391
• ಟ್ರಾನ್ಸಿಟ್ ತಂಡಗಳು : 601
• ಮೊಬೈಲ್ ತಂಡಗಳು : 460
• ಒಟ್ಟು ಲಸಿಕೆದಾರರು : 17,808
• ಒಟ್ಟು ಮೇಲ್ವಿಚಾರಕರು : 881
• ಸ್ಲಂ ಪ್ರದೇಶಗಳ ಸಂಖ್ಯೆ : 1,349
• ಸ್ಲಂ ಪ್ರದೇಶಗಳಲ್ಲಿನ 0–5 ವರ್ಷದ ಮಕ್ಕಳು : 4,69,849
• ವಲಸೆ ಜನಸಂಖ್ಯೆ ಇರುವ ಸ್ಥಳಗಳು : 4,373
• ವಲಸೆ ಜನಸಂಖ್ಯೆ : 1,61,161
• ವಲಸೆ ಮಕ್ಕಳ ಸಂಖ್ಯೆ (0–5 ವರ್ಷ) : 11,899
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಎಲ್ಲಾ ಪೋಷಕರು, ಪಾಲಕರು ಹಾಗೂ ಸಮುದಾಯದ ಸದಸ್ಯರಿಗೆ ಈ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಐದು ವರ್ಷದೊಳಗಿನ ಮಕ್ಕಳಿಗೆ ಶೇ.100 ಲಸಿಕೆ ವ್ಯಾಪ್ತಿ ಸಾಧಿಸುವಲ್ಲಿ ಹಾಗೂ ಪೋಲಿಯೋ ಮುಕ್ತ ಭಾರತವನ್ನು ಉಳಿಸಿಕೊಳ್ಳುವಲ್ಲಿ ಸಹಕರಿಸುವಂತೆ ಮನವಿ ಮಾಡುತ್ತದೆ.








