ಬೆಳಗಾವಿ : ಕುಂದಾಪುರ ತಾಲೂಕಿನ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಭರವಸೆ ನೀಡಿದರು.
ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕುಂದಾಪುರ ತಾಲೂಕಿನ ಇಎಸಐ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ಹುದ್ದೆಯನ್ನು ಮಂಜೂರು ಮಾಡಲಾಗಿತ್ತು ಆದರೆ 2015 ರಿಂದ ಒಬ್ಬರೇ ಒಬ್ಬರು ಖಾಯಂ ವೈದ್ಯರು ಇಲ್ಲ. ಬೇರೆ ಕಡೆಯಿಂದ ನಿಯೋಜನೆ ಮೇರೆಗೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ಕಾರ್ಮಿಕರಿಗೆ ಸರಿಯಾದ ಚಿಕಿತ್ಸೆ ಸಿಗದೆ ತೊಂದರೆಯಾಗಿದೆ ಎಂದು ಕಿರಣ್ ಕುಮಾರ್ ಅವರು ಹೇಳಿದರು.
ಕುಂದಾಪುರದ ಇಎಸ್‌ಐ ಆಸ್ಪತ್ರೆಯಲ್ಲಿ ನಿಯೋಜನೆ ಮೇಲೆ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಯಂ ವೈದ್ಯರು ಬೇಕು ಎಂಬ ಬೇಡಿಕೆ ಬಗ್ಗೆ ಪರಿಶೀಲನೆ ಮಾಡಲಾಗುವುದು. ಮೂರು ವಾರದಲ್ಲಿ ತಾತ್ಕಾಲಿಕ ವೈದ್ಯರ ನೇಮಕ ಮಾಡಲಾಗುವುದು ಎಂದು ಹೇಳಿದರು.
ಆಸ್ಪತ್ರೆ ಹೆಸರು ಬಿಟ್ಟಿದ್ದರೆ ಕ್ರಮ: ಇಎಸ್‌ಐ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ಪಟ್ಟಿಯಲ್ಲಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಹಾಗೂ ಕುಂದಾಪುರದ ಆದರ್ಶ ಆಸ್ಪತ್ರೆ ಬಿಟ್ಟು ಹೋಗಿದೆ ಎಂಬ ಕಿರಣ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಲಾಡ್ ಅವರು, ಕಸ್ತೂರಬಾ, ಆದರ್ಶ ಆಸ್ಪತ್ರೆ ಬಿಟ್ಟು ಹೋಗಿದ್ದರೆ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಮಿಕ ಸಚಿವರಿಗೆ ಧನ್ಯವಾದ: ಖಾಸಗಿ ಆಸ್ಪತ್ರೆಗಳ ಹೊಂದಾಣಿಕೆ ಅವಧಿಯನ್ನು ಎರಡು ವರ್ಷಕ್ಕೆ ವಿಸ್ತರಿಸಿದ್ದಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕಿರಣ್ ಕುಮಾರ್ ಅವರು ಧನ್ಯವಾದಗಳನ್ನು ತಿಳಿಸಿದರು. ಈ ಬಗ್ಗೆ ಸಚಿವರಿಗೆ ಕಿರಣ್ ಕುಮಾರ್ ಅವರು ಮನವಿ ಮಾಡಿದ್ದರು.
Action will be taken to appoint doctors to Kundapur ESI Hospital: Labour Minister Santosh Lad assures








