ಬೆಳಗಾವಿ ಸುವರ್ಣ ವಿಧಾನಸೌಧ: ಡಿಸೆಂಬರ್.21ರಂದು ಪಲ್ಸ್ ಪೋಲಿಯೋ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂದು ತಪ್ಪದೇ ಪಲ್ಸ್ ಪೊಲಿಯೋ ಹನಿಯನ್ನು ಐದು ವರ್ಷದ ಒಳಗಿನ ಮಕ್ಕಳಿಗೆ ಹಾಕಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಡಿಸೆಂಬ 21ರಂದು ಪೋಲಿಯೋ ಲಸಿಕೆ ಕಾರ್ಯಕ್ರಮದ ಕುರಿತು ಮಾತನಾಡಿದರು. ಅಂದಾಜು 62 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು. ರಾಜ್ಯದ ಎಲ್ಲ ಆಸ್ಪತ್ರೆ, ಅಂಗನವಾಡಿ, ಗುಡ್ಡಗಾಡು ಪ್ರದೇಶ, ಇಟ್ಟಿಗೆ ಭಟ್ಟಿ, ಕೊಳಚೆ ಪ್ರದೇಶ, ರೈಲ್ವೆ ಸ್ಟೇಷನ್ ಮುಂತಾದ ಕಡೆಗಳಲ್ಲಿ ಆದ್ಯತೆ ಮೆರೆಗೆ ಲಸಿಕೆ ಹಾಕಲಾಗುವುದು ಎಂದರು.
ಎಲ್ಲ ಸರಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಕ್ರಮ ನಡೆಸಲಾಗುವುದು. 0-5 ವರ್ಷದ ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಿಸಲೇ ಬೇಕು. ಮೊದಲು ಹಾಕಿಸಿದ್ದರೂ ಈ ಬಾರಿಯೂ ಎರಡು ಹನಿ ಲಸಿಕೆ ಹಾಕಿಸಲೇಬೇಕು. ಪೋಲಿಯೋ ಮುಕ್ತ ದೇಶವಾಗಿರುವ ಭಾರತ ಇದನ್ನು ಮುಂದುವರೆಸಲು ಸಾರ್ವಜನಿಕರ ಸಹಕಾರ ಅಗತ್ಯ. ಡಿಸೆಂಬರ್ 21 ರಂದು ಬೂತ್ಗಳಲ್ಲಿ ನಂತರ 2-3 ದಿನ ಮನೆಮನೆಗೆ ತೆರಳಿ 0-5 ವರ್ಷದ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಸರ್ವಜನಿಕರು ಸಹಕರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
33258 ಭೂತ್ ಗಳು, 1030 ಸಂಚಾರಿ ತಂಡಗಳು, 1096 ಟ್ರಾನ್ಸಿಟ್ ತಂಡಗಳು, 113115 ಲಸಿಕಾ ಕಾರ್ಯಕರ್ತರು, 7322 ಮೇಲ್ವಿಚಾರಕರನ್ನು ನೇಮಿಸಲಾಗಿದೆ. Nearby Vaccination centre Karnataka ಆಪ್ ಮೂಲಕ ಹತ್ತಿರದ ಲಸಿಕಾ ಕೇಂದ್ರ ಸಂಪರ್ಕಿಸಬಹುದು. ಸಂಪೂರ್ಣ ಸುರಕ್ಷಿತವಾಗಿದ್ದು ವದಂತಿಗಳಿಗೆ ಕಿವಿಗೊಡದೆ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದರು.
ರಾಷ್ಟ್ರಿಯ ಲಸಿಕಾ ದಿನ 21 ನೇ ಡಿಸೆಂಬರ್ 2025
ಭಾರತವು ಪೋಲಿಯೋ ಮುಕ್ತ ರಾಷ್ಟ್ರವಾಗಿ 14 ವರ್ಷಕ್ಕೂ ಹೆಚ್ಚು ವರ್ಷಗಳಾಗಿದೆ. ಇದು ಒಂದು ಮಹತ್ತರ ಸಾಧನೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಭಾರತದ ನೆರೆಯ ರಾಷ್ಟ್ರಗಳಲ್ಲಿ Wild Polio Virus ನ ಸಂಭಾವ್ಯ ಹರಡುವಿಕೆಯು ಇಂದಿಗೂ ಜಗತ್ತಿನಾದ್ಯಂತ ಹಾಗೂ ಭಾರತದ ಮಕ್ಕಳನ್ನು ಅಪಾಯದಂಚಿನಲ್ಲಿರಿಸಿದೆ.
2025 ರಲ್ಲಿ ಇದುವರೆಗೆ ನೆರೆ ರಾಷ್ಟ್ರಗಳಾದ ಪಾಕಿಸ್ತಾನದಲ್ಲಿ 51 ಮತ್ತು ಆಫ್ಘಾನಿಸ್ತಾನದಲ್ಲಿ 10 ಪೋಲಿಯೋ ಪ್ರಕರಣಗಳು ಕಂಡುಬಂದಿದ್ದು, ಈ ದೇಶಗಳ ಮೂಲಕ ಭಾರತಕ್ಕೆ ಪೋಲಿಯೋ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಹಾಗೂ ಪೋಲಿಯೋ ಮುಕ್ತ ಭಾರತ ಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗಲು ಮುಂಜಾಗ್ರತಾ ದೃಷ್ಠಿಯಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಮುಂದುವರಿಸಲಾಗಿದೆ.
ಪೋಲಿಯೋ ನಿರ್ಮೂಲನೆ ಸ್ಥಿತಿಯನ್ನು ಕಾಯ್ದಿರಿಸಿಕೊಳ್ಳುವುದು ಮತ್ತು India Expert Advisory Group (IEAG) ಭಾರತ ತಜ್ಞ ಸಲಹಾ ಗುಂಪಿನ ಶಿಫಾರಸ್ಸಿನನ್ವಯ 0-5 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ವ್ಯಾಪ್ತಿಗೊಳಪಡಿಸಿದಂತೆ ರಾಷ್ಟ್ರಿಯ ಲಸಿಕಾ ದಿನ (ಪಲ್ಸ್ ಪೋಲಿಯೋ) ವನ್ನು 21 ನೇ ಡಿಸೆಂಬರ್ 2025 ರಂದು ನಡೆಸಲು ಭಾರತ ಸರ್ಕಾರದ ಉಲ್ಲೇಖಿತ ಪತ್ರದಲ್ಲಿ ತಿಳಿಸಲಾಗಿರುತ್ತದೆ.
21 ನೇ ಡಿಸೆಂಬರ್ 2025, ಭಾನುವಾರ ದಂದು bOPV ಲಸಿಕೆಯನ್ನು ಬಳಸಿ ಒಂದು ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಮೊದಲನೇ ದಿನ ಅಂದರೆ 21 ನೇ ಡಿಸೆಂಬರ್ 2025ರಂದು ಪೋಲಿಯೋ ಬೂತ್‌ಗಳಲ್ಲಿ ಹಾಗೂ ನಂತರದ 2 – 3 ದಿನಗಳಲ್ಲಿ ಮನೆ-ಮನೆ ಭೇಟಿಯ ಮೂಲಕ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ವಿಶೇಷವಾಗಿ ವಲಸಿಗ ಸಮುದಾಯದ, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳಲ್ಲಿನ ಹಾಗೂ ನಗರ ಪ್ರದೇಶದ ಸ್ಲಂಗಳಲ್ಲಿ ವಾಸಿಸುವ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ ಬಾಯಿಯ ಮೂಲಕ ಎರಡು ಹನಿ ಪೋಲಿಯೋ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಪೋಲಿಯೋ ನಿರ್ಮೂಲನೆಯ ಈ ಹಂತದಲ್ಲಿ ಅತ್ಯುನ್ನತ ಗುಣಮಟ್ಟದ ತಯಾರಿ, ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಗಳು ಹಾಗೂ ಮೇಲ್ವಿಚಾರಣೆಯು ಪಲ್ಸ್ ಪೋಲಿಯೋ ಕಾರ್ಯಕ್ರಮದ ನಿರ್ಣಾಯಕ ಅಂಶಗಳಾಗಿರುತ್ತದೆ.
ಪೋಲಿಯೋ ಕುರಿತ ವಿವರವಾದ ಮಾಹಿತಿ:
- ಪೋಲಿಯೋ ಸೋಂಕಿನಲ್ಲಿ ಮೂರು ವಿಧಗಳಿಗೆ: ಪಿ-1, ಪಿ-2 ಮತ್ತು ಪಿ-3
- ಪಿ-2 ವಿಧದ ಪೋಲಿಯೋ ಸೋಂಕು ಜಾಗತಿಕ ಮಟ್ಟದಲ್ಲಿ ನಿರ್ಮೂಲನೆಯಾಗಿದೆ ಹಾಗೂ 1999 ರಿಂದ ಯಾವುದೇ ಪ್ರಕರಣ ವರದಿಯಾಗಿರುವುದಿಲ್ಲ ಮತ್ತು ಅಧಿಕೃತವಾಗಿ 2015 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ಪಡೆದಿದೆ.
- ಪಿ-3:- ಪಿ-3 ಯ ಯಾವುದೇ ಪ್ರಕರಣಗಳು ವರದಿಯಾಗಿರುವುದಿಲ್ಲ. ಇದಕ್ಕೆ ಅಧಿಕೃತವಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಕ್ಟೋಬರ್ 2019 ರಲ್ಲಿ ಪ್ರಮಾಣಪತ್ರ ಪಡೆದಿದೆ.
- ಈಗ ಪಿ-1 ಪ್ರಕರಣಗಳು ಮಾತ್ರವೇ ವರದಿಯಾಗುತ್ತಿರುವುದು.
- ದಿನಾಂಕ: 13.01.2011 ರಲ್ಲಿ ಪಶ್ವಿಮ ಬಂಗಾಳದಲ್ಲಿ ಕೊನೆಯ ಪೋಲಿಯೋ ಪ್ರಕರಣವು ವರದಿಯಾಗಿತ್ತು. ಇದಾದ ಮೇಲೆ ಭಾರತದಲ್ಲಿ ಇಲ್ಲಿಯವರೆವಿಗೂ ಯಾವುದೇ ಪೋಲಿಯೋ ಪ್ರಕರಣಗಳು ವರದಿಯಾಗಿರುವುದಿಲ್ಲ.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ನಿಯಮಿತವಾಗಿ ಪ್ರತಿ ಶಿಶುವಿಗೆ 5 ವರಸೆ ಒಪಿವಿ (ಓರಲ್ ಪೋಲಿಯೋ ವ್ಯಾಕ್ಸೀನ್) ಮತ್ತು 3 ವರಸೆ ಐಪಿವಿ (ಇನ್‌ಜಕ್ಟಬಲ್ ಪೋಲಿಯೋ ವ್ಯಾಕ್ಸೀನ್) ಲಸಿಕೆಗಳನ್ನು ನೀಡಲಾಗುತ್ತಿದೆ. ಯಾವುದೇ ಮಗುವು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವ ಗುರಿ ಹೊಂದಿದೆ.
ಪಲ್ಸ್ ಪೋಲಿಯೋ ಕಾರ್ಯಕ್ರಮ 2025 ರ ವಿವರ: ಪ್ರತಿ ವರ್ಷದಂತೆ ಈ ವರ್ಷವೂ 21 ನೇ ಡಿಸೆಂಬರ್ 2025 ರಂದು ಹಮ್ಮಿಕೊಳ್ಳಲಾಗಿರುವ ಒಂದು ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಪ್ರತಿ ಮಗುವಿಗೆ ಎರಡು ಹನಿ ಪೋಲಿಯೋ ಲಸಿಕೆಯನ್ನು ನೀಡಲಿದ್ದು, ಅಂದಾಜು 62 ಲಕ್ಷ ಮಕ್ಕಳನ್ನು ತಲುಪಲಾಗುವುದು.
ರಾಜ್ಯದಲ್ಲಿ ಎಲ್ಲಾ ಆಸ್ಪತ್ರೆ, ಅಂಗನವಾಡಿಗಳಲ್ಲಲ್ಲದೆ ಗುಡ್ಡಗಾಡು ಪ್ರದೇಶ, ಇಟ್ಟಿಗೆ ಬಟ್ಟಿ, ಕಾಮಗಾರಿ ಪ್ರದೇಶ, ಸ್ಲಂಗಳು, ವಲಸೆ ಪ್ರದೇಶಗಳು, ತೋಟದ ಮನೆ, ಪಟ್ಟಣ, ನಗರ ಪ್ರದೇಶಗಳ ರೈಲ್ವೇ ಸ್ಟೇಷನ್, ಮೆಟ್ರೋ, ಸೀಪೋರ್ಟ್, ಏರ್‌ಪೋರ್ಟ್ ಗಳಲ್ಲಿ, ಕೊಳಚೆ ಪ್ರದೇಶಗಳು, ವಿಪಿಡಿ ಔಟ್‌ಬ್ರೇಕ್ ಪ್ರದೇಶಗಳಲ್ಲಿ ಕೂಡ ಆದ್ಯತೆ ಮೇರೆಗೆ ಲಸಿಕೆ ಹಾಕಲು ಕ್ರಮವಹಿಸಲಾಗಿದೆ.
ಪಲ್ಸ್ ಪೋಲಿಯೋದ ಸಂಪೂರ್ಣ ಯಶಸ್ಸನ್ನು ಸಾಧಿಸಲು ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಲ್ಲದೆ ಇತರೆ ಸಹಕಾರ ಸಂಘ ಸಂಸ್ಥೆಗಳಾದ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್, ಯುಎನ್‌ಡಿಪಿ, ರೋಟರಿ, ಐಎಪಿ ಮತ್ತು ಐಎಂಎ ಗಳ ಸಹಕಾರವೂ ಇದೆ.
- ಗುರಿ (0-5 ವರ್ಷ) : 6240114
- ಬೂತ್‌ಗಳ ಸಂಖ್ಯೆ : 33258
- ಸಂಚಾರಿ ತಂಡ : 1030
- ಟ್ರಾನ್ಸಿಟ್ ತಂಡ : 2096
- ಲಸಿಕಾ ಕಾರ್ಯಕರ್ತರು : 113115
- ಮೇಲ್ವಿಚಾರಕರು : 7322
ಪ್ರಮುಖ ಸಂದೇಶಗಳು:
- ಎಲ್ಲಾ 0-5 ವರ್ಷದ ಮಕ್ಕಳಿಗೆ 21 ನೇ ಡಿಸೆಂಬರ್ 2025 ರಂದು ಒಂದು ಸುತ್ತಿನಲ್ಲಿ ಪೋಲಿಯೋ ಲಸಿಕೆ ಹಾಕಲಾಗುವುದು.
- ಈ ಹಿಂದೆ ಎಷ್ಟು ಬಾರಿ ಪೋಲಿಯೋ ಲಸಿಕೆ ಪಡೆದಿದ್ದರೂ ಸಹ ಈ ಅಭಿಯಾನದಲ್ಲಿ ಮತ್ತೆ ಲಸಿಕೆ ಹಾಕಿಸುವುದು ಅವಶ್ಯಕವಾಗಿದೆ.
- ಪೋಲಿಯೋ ಲಸಿಕೆ ಸಂಪೂರ್ಣ ಸುರಕ್ಷಿತ. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವುದು.
- ಜೀವರಕ್ಷಕ ಎರಡು ಹನಿಗಳಿಂದ ಪೋಲಿಯೋ ಮೇಲಿನ ಗೆಲುವನ್ನು ಮುಂದುವರೆಸೋಣ.
- ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆರೋಗ್ಯ ಕೇಂದ್ರವನ್ನು ಭೇಟಿ ಮಾಡಿ ಅಥವಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ.
ನಿಮ್ಮ ಹತ್ತಿರದ ಪೋಲಿಯೋ ಬೂತ್ ಅನ್ನು ಗುರುತಿಸಲು “Nearby Vaccination centre Karnataka” ಆಂಡ್ರಾಯ್ಡ ಆ್ಯಪ್ ಡೌನ್ ಲೋಡ್ ಮಾಡಿ ಎಂಬುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.








