ಬೆಂಗಳೂರು : ಬೆಂಗಳೂರಿನಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು ರಸ್ತೆಯ ಮೇಲೆ ಮಲಗಿದ್ದಂತಹ ಸಾಕು ನಾಯಿಯ ಮೇಲೆ ನೆರೆಮನೆಯ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಕಾರು ಹಾಯಿಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ರಾಯಸಂದ್ರದ ಬಳಿ ಈ ಘಟನೆ ನಡೆದಿದ್ದು, ಹರೀಶ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ.
ರಮೇಶ್ ಎಂಬುವರ ಮನೆಯ ಬಳಿ ಸಾಕು ನಾಯಿಗಳು ಪದೇ ಪದೇ ಸಾಯುತ್ತಿರುತ್ತವೆ. ಅದು ಆಕಸ್ಮಿಕವಾದ ಘಟನೆ ಎಂದು ತಿಳಿದು ಸುಮ್ಮನಾಗಿರುತ್ತಾರೆ. ಆದರೆ ಡಿಸೆಂಬರ್ 13 ರಂದು ಬೆಳಗ್ಗೆ 06.40 ಗಂಟೆಗೆ ಅವರ ಸಾಕು ನಾಯಿ ರಸ್ತೆಯಲ್ಲಿ ಸಾವನ್ನಪ್ಪಿತ್ತು. ಈ ವೇಳೆ ಅನುಮಾನ ಬಂದು ರಮೇಶ್ ಅಲ್ಲಿನ ಸಿಸಿ ಕ್ಯಾಮರಾವನ್ನು ನೋಡಿದ ನಂತರ ಮನೆಯ ಹಿಂಭಾಗದ ನಿವಾಸಿಯಾದ ಹರೀಶ್ ಅಲಿಯಾಸ್ ಹರೀ ಎಂಬಾತನು ಈ ಕೃತ್ಯ ಎಸಗಿದ್ದಾನೆ ಅನ್ನೋದು ತಿಳಿದುಬಂದಿದೆ ಅವರು ಆರೋಪಿಸಿದ್ದಾರೆ.
ರಸ್ತೆಯ ಮಧ್ಯದಲ್ಲಿ ಮಲಗಿದ್ದ ನಾಯಿ, ಕಾರು ತನ್ನ ಕಡೆಗೆ ಬರುತ್ತಿದೆ ಎಂದು ತಿಳಿದು ಅಲ್ಲಿಂದ ತೆರಳಲು ಯತ್ನಿಸುತ್ತಿರುವುದು ವಿಡಿಯೋದಲ್ಲಿದೆ. ಆದರೆ, ಕಾರು ಚಾಲಕ, ನಾಯಿ ದೂರ ಹೋಗುವುದನ್ನು ಗಮನಿಸಿದ ನಂತರ, ವೇಗವನ್ನು ಹೆಚ್ಚಿಸುತ್ತಾನೆ ಮತ್ತು ಉದ್ದೇಶಪೂರ್ವಕವಾಗಿ ನಾಯಿಯ ಮೇಲೆ ಕಾರು ಹರಿಸಿರುವುದು ಸಿಸಿಟಿಯಲ್ಲಿ ದಾಖಲಾಗಿದೆ.








