ಉಡುಪಿ :ಉಡುಪಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಆಫೀಸ್ ಗೆ ರಜೆ ಸಿಗದಿದ್ದಕ್ಕೆ ಆನ್ ಲೈನ್ ನಲ್ಲೇ ಜೋಡಿಯೊಂದು ನಿಶ್ಚಿತಾರ್ಥ ಮಾಡಿಕೊಂಡ ಘಟನೆ ನಡೆದಿದೆ.
ಹೌದು, ಉಡುಪಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲು ರಜೆ ಸಿಗದೇ ಇದ್ದಕ್ಕೆ ಕುಟುಂಬದವರು ಆನ್ ಲೈನ್ ನಲ್ಲೇ ಎಂಗೇಜ್ ಮೆಂಟ್ ಮಾಡಿಸಿದ್ದಾರೆ. ಆನ್ ಲೈನ್ ನಲ್ಲೇ ಪರಸ್ಪರ ಉಂಗುರ ತೋರಿಸಿ ಯುವಕ ಯುವತಿ ಉಂಗುರ ಧರಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಯುವಕ ಸುಹಾಸ್ ಎಸ್ ಮತ್ತು ಉಡುಪಿ ನಿವಾಸಿ ಕಾತ್ಯಾಯಿನಿ ಅವರ ನಿಶ್ಚಿತಾರ್ಥ ನಿಗದಿಯಾಗಿತ್ತು. ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಮಾಗಡಿ ಮೂಲದ ಸುಹಾಸ್ಗೆ ಇಂಡಿಯಾಗೆ ಬರಲು ರಜೆ ಸಿಕ್ಕಿಲ್ಲ. ಮುಂದಿನ ಜ. 7 ಹಾಗೂ 8 ಕ್ಕೆ ಮದುವೆ ನಿಗದಿಯಾಗಿದ್ದು, ನಿಶ್ಚಿತಾರ್ಥಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಆನ್ಲೈನ್ ಮೂಲಕ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ ಕುಟುಂಬ ವೀಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿ ಮುಗಿಸಿದೆ. ಉಡುಪಿಯಲ್ಲಿ ಬೆಳಗ್ಗೆ ಸಮಯದಲ್ಲಿ ನಿಶ್ಚಿತಾರ್ಥ ನಡೆದಿದ್ರೆ, ಕೆನಡಾದಲ್ಲಿ ಮಧ್ಯರಾತ್ರಿ ಆಗಿತ್ತು. ಸದ್ಯ ಅಪರೂಪದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.








