ಬಾಗಲಕೋಟೆ : ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಪ್ರಖ್ಯಾತ ಜಾನಪದ ಗಾಯಕರಿದ್ದಾರೆ.ಅದರಲ್ಲೂ ಬಿಗ್ ಬಾಸ್ ಸೀಸನ್ 12 ರಲ್ಲಿ ಉತ್ತರ ಕರ್ನಾಟಕದ ಖ್ಯಾತ ಜಾನಪದ ಗಾಯಕ ಮಾಳು ನಿಪನಾಳ್ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಇದೀಗ ಉತ್ತರ ಕರ್ನಾಟಕದ ಯೂಟ್ಯೂಬರ್ ಸ್ಟಾರ್ ಗಾಯಕ ಒಬ್ಬನ ವಿರುದ್ಧ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.
ಹೌದು ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ ಸೇರಿದಂತೆ 7 ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಆಗಮಿಸಿದ್ದ. ಇದೇ ಆರ್ಕೆಸ್ಟ್ರಾದಲ್ಲಿ ಅಪ್ರಾಪ್ತ ಬಾಲಕಿ ಡ್ಯಾನ್ಸ್ ಮಾಡಲು ಬಂದಿದ್ದಳು ಎನ್ನಲಾಗಿದೆ.
ಕಾರ್ಯಕ್ರಮದ ವೇಳೆ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಳೆ.
ಸದ್ಯ ಮ್ಯೂಸಿಕ್ ಮೈಲಾರಿ ಸೇರಿದಂತೆ 7 ಜನರು ಅಪರಾಧ ಎಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.ಡಿಸೆಂಬರ್ 14ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಪ್ರಕರಣವನ್ನು ಡಿಸೆಂಬರ್ 15ರಂದು ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಠಾಣೆಯಲ್ಲಿ ಮ್ಯೂಸಿಕ್ ಮೈಲಾರಿ ಸೇರಿ ಏಳು ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.








