ಬೆಳಗಾವಿ ಸುವರ್ಣಸೌಧ : ಉತ್ತರ ಕರ್ನಾಟಕ ಭಾಗದಲ್ಲಿ ಇಎಸ್ಐ ಆಸ್ಪತ್ರೆಗೆ ಬೇಡಿಕೆ ಇದೆ. ಆದರೆ ಐಪಿ ಹೋಲ್ಡರ್ (ESI ಯೋಜನೆಯಲ್ಲಿ ನೋಂದಾಯಿಸಿದ ವಿಮೆ ಮಾಡಿದ ವ್ಯಕ್ತಿ (Insured Person) ಕಡಿಮೆ ಇರುವ ಕಾರಣ ಇಎಸ್ಐ ಆಸ್ಪತ್ರೆಗೆ ಅನುಮತಿ ಸಿಗುತ್ತಿಲ್ಲ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್ ಲಾಡ್ ಅವರು ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಾಲ್ಕನೇ ದಿನ ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿ ರಾಣೆಬೆನ್ನೂರಿನ ಶಾಸಕರಾದ ಪ್ರಕಾಶ್ ಕೋಳಿವಾಡ ಅವರ ಪ್ರಶ್ನೆಗೆ ಉತ್ತರ ನೀಡಿದರು.
ಇಎಸ್ಐ ಆಸ್ಪತ್ರೆ ಆಗಲು ೫೦ ಸಾವಿರ ಐಪಿ ಹೋಲ್ಡರ್ ಇರಬೇಕು. ಎರಡು ಅಥವಾ ಮೂರು ಜಿಲ್ಲೆಗೆ ಸೇರಿ ಒಂದು ಇಎಸ್ಐ ಆಸ್ಪತ್ರೆಗೆ ಅವಕಾಶ ನೀಡಲು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದಿದ್ದೇನೆ. ಅನುಮತಿ ಸಿಕ್ಕರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇಎಸ್ಐ ಆಸ್ಪತ್ರೆ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಇದೆ. ಅದರಂತೆ ನಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಇಎಸ್ಐ ಡಿಸ್ಪೆನ್ಸರಿಗಳಲ್ಲಿ ಪರೀಕ್ಷೆ ಮಾತ್ರ ಮಾಡಲು ಅವಕಾಶ ಇದೆ. ಹೆಚ್ಚಿನ ಚಿಕಿತ್ಸೆ ಸಾಧ್ಯವಿಲ್ಲ. ಈ ಬಗ್ಗೆ ರೋಗಿಗಳ ಸಂಬಂಧಿಗಳು ತಿಳಿದುಕೊಳ್ಳಬೇಕು ಎಂದು ಲಾಡ್ ಅವರು ವಿವರಿಸಿದರು.
ರಾಣೆಬೆನ್ನೂರಿನಲ್ಲಿ ೨೦೨೨ ರಲ್ಲಿ ಇಎಸ್ಐ ಆಸ್ಪತ್ರೆ ಆರಂಭವಾಗಿದೆ. ನಾಲ್ಕು ವರ್ಷ ಆದರೂ ಖಾಯಂ ವೈದ್ಯರು ಇಲ್ಲ. ಇದರಿಂದ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಮೃತಪಡುತ್ತಿದ್ದಾರೆ ಎಂದು ಪ್ರಕಾಶ್ ಕೋಳಿವಾಡ ಅವರು ತಿಳಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು ಖಾಯಂ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಚಿವ ಲಾಡ್ ಅವರಿಗೆ ಅಭಿನಂದನೆ
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ಸೌಲಭ್ಯವನ್ನು ಜಾರಿ ಮಾಡಿದಕ್ಕೆ ಪ್ರಕಾಶ್ ಕೋಳಿವಾಡ ಅವರು, ಸಂತೋಷ್ ಲಾಡ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಮಹಿಳೆಯರಿಗೆ ಋತುಚಕ್ರ ರಜೆ ನೀಡಿದ್ದರಿಂದ ಸಾಕಷ್ಟು ಅನುಕೂಲವಾಗಿದೆ. ಇದು ಬಹುದಿನದ ಬೇಡಿಕೆ ಆಗಿತ್ತು. ಸರ್ಕಾರಕ್ಕೆ ವಿಶೇಷವಾಗಿ ಸಚಿವ ಲಾಡ್ ಅವರಿಗೆ ಅಭಿನಂದನೆಗಳು. ರಾಣೆಬೆನ್ನೂರಿನಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಆರಂಭಕ್ಕೆ ಸಹ ಲಾಡ್ ಅವರು ಕ್ರಮವಹಿಸಿದ್ದಾರೆ. ಅದಕ್ಕೂ ಅವರಿಗೆ ಅಭಿನಂದನೆಗಳು ಎಂದು ಕಲಾಪದಲ್ಲಿ ಹೇಳಿದರು.








