ಬೆಂಗಳೂರು : ಕಳೆದ ಕೆಲವು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಸಿಜ್ ಮಾಡಿದ್ದು ಅಲ್ಲದೆ ಹಲವು ವಿದೇಶಿ ಡ್ರಗ್ಸ್ ಹೆಡ್ಲರ್ ಗಳು ಸೇರಿದಂತೆ ಹಲವರನ್ನು ಅರೆಸ್ಟ್ ಮಾಡಿದ್ದಾರೆ.
ಇದೀಗ ಈ ವಿಚಾರವಾಗಿ ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಮಾದಕವಸ್ತು ಮಾರಾಟಕ್ಕೆ ಉತ್ತೇಜನ ನೀಡುವ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಸೇವೆಯಿಂದಲೇ ವಜಾ ಮಾಡುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಪಣ ತೊಡಲಾಗಿದ್ದು, ಈಗಾಗಲೇ ಪಿಡುಗಿನ ವಿರುದ್ಧ ಸಮರ ಸಾರಲಾಗಿದೆ. ಹಿಂದೆಂದಿಗಿಂತಲೂ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿ ಸಾವಿರಾರು ಕೆ.ಜಿ. ತರಹೇವಾರಿ ಡ್ರಗ್ಸ್ ಜಪ್ತಿ ಮಾಡಿ, ನಾಶಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿಯನ್ನು ಎದುರಿಸಲು ಹಾಗೂ ತಡೆಗಟ್ಟಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ನೇತೃತ್ವದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ಎಎನ್ ಟಿಎಫ್) ಪಡೆ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪಡೆಯು ಪರಿಣಾಮಕಾರಿ ಕೆಲಸ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.








