ಚಾಮರಾಜನಗರ :ಕಳೆದ ಕೆಲವು ದಿನಗಳಿಂದ ಚಾಮರಾಜನಗರ, ಮೈಸೂರು ಸೇರಿದಂತೆ ಆ ಭಾಗದ ಹಲವು ಜಿಲ್ಲೆಗಳಲ್ಲಿ ಹುಲಿ ದಾಳಿಯಿಂದ ಹಲವರು ಬಲಿಯಾಗಿದ್ದರು. ಅಲ್ಲದೆ ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಕೂಡ ಹುಲಿ ದಾಳಿ ಇನ್ನು ನಿಂತಿಲ್ಲ.
ಇದೀಗ ಹುಲಿ ದಾಳಿ ಉಪಟಳ ನಿಂತಿತು ಎಂಬ ಆಶಾಭಾವ ಮೂಡಿದ ಹೊತ್ತಲ್ಲೇ ರೈತನ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ. ಕುಂದಕೆರೆ ಗ್ರಾಮದ ಮಲಿಯಪ್ಪ (60) ಹುಲಿ ದಾಳಿಗೊಳಗಾದ ರೈತ ಎಂದು ತಿಳಿದುಬಂದಿದೆ.
ರೈತ ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುವಾಗ ಪೊದೆಯಲ್ಲಿ ಅಡಗಿದ್ದ ಹುಲಿ ಏಕಾಏಕಿ ಹಸುವಿನ ಮೇಲೆ ಎಗರಿ ದಾಳಿ ಮಾಡಿದೆ. ಕೂಡಲೇ ಮಲಿಯಪ್ಪ ಹಸು ಬಿಡಿಸಲು ಕೂಗಿಕೊಂಡಾಗ ರೈತನ ಮೇಲೆ ದಾಳಿ ಮಾಡಿದ್ದು ಕಣ್ಣು, ಹಣೆ, ತಲೆ ಹಿಂಬದಿ ಭಾಗಕ್ಕೆ ಕಚ್ಚಿ, ಪರಚಿ ತೀವ್ರವಾಗಿ ಗಾಯಗೊಳಿಸಿದೆ.








