ಮಂಡ್ಯ : ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಚಿರತೆ ಉಪಟಳ ಮುಂದುವರೆದಿದ್ದು, ಚಿರತೆ ದಾಳಿಗೆ ಬರೋಬ್ಬರಿ 4 ಕುರಿಗಳು ಸಾವನ್ನಪ್ಪಿದ್ದು, ಮತ್ತೆರಡು ಕುರಿಗಳು ಗಂಭೀರ ಗಾಯಗೊಂಡಿರುವ ಘಟನೆ ಜರುಗಿದೆ.
ಮದ್ದೂರು ತಾಲೂಕಿನ ವಳಗೆರೆಹಳ್ಳಿ ಶ್ರೀನಿವಾಸ್ ಎಂಬುವವರ ಮನೆಯ ಹಿಂಭಾಗದ ಕೊಟ್ಟಿಗೆಗೆ ಭಾನುವಾರ ರಾತ್ರಿ 8.30 ರ ಸುಮಾರಿಗೆ ನುಗ್ಗಿರುವ ಚಿರತೆಯೊಂದು 18 ಕುರಿಗಳ ಪೈಕಿ 6 ಕುರಿಗಳ ಮೇಲೆ ದಾಳಿ ಮಾಡಿದೆ. ಕುರಿಗಳ ಚೀರಾಟದಿಂದ ಕೊಟ್ಟಿಗೆಗೆ ಬಂದ ಶ್ರೀನಿವಾಸ್ ಚಿರತೆ ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ಕೂಗಾಟ ಚೀರಾಟ ನಡೆಸಿದ ಪರಿಣಾಮ ಚಿರತೆ ಅಲ್ಲಿಂದ ಪರಾರಿಯಾಗಿದೆ. ಆದರೆ, ಅಷ್ಟರಲ್ಲಿ 4 ಕುರಿಗಳು ಸಾವನ್ನಪ್ಪಿ 2 ಕುರಿಗಳು ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿವೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಗವಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಚಿರತೆ ಸೆರೆಗೆ ಅಗತ್ಯವಿರುವ ಕಡೆಗಳಲ್ಲಿ ಈಗಾಗಲೆ ಹಲವಾರು ಗ್ರಾಮಗಳಲ್ಲಿ ಬೋನನ್ನು ಇರಿಸಲಾಗಿದ್ದು, ಹಲವಾರು ಚಿರತೆಗಳನ್ನು ಸೆರೆಹಿಡಿದು ಮೇಲಾಧಿಕಾರಿಗಳ ಆದೇಶದ ಮೇರೆಗೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಇಲಾಖೆ ವತಿಯಿಂದ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ರೈತ ಶ್ರೀನಿವಾಸ್ ಅವರಿಗೆ ಶೀಘ್ರವೇ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಇನ್ನು ತಾಲೂಕಿನಾದ್ಯಂತ ಚಿರತೆಗಳ ಉಪಟಳ ಹೆಚ್ಚಾಗಿದ್ದು, ಇದರಿಂದ ರಾತ್ರಿಯ ವೇಳೆ ರೈತರು ಜಮೀನುಗಳಿಗೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಹಾಗೂ ಕೆಲವು ಗ್ರಾಮಗಳಲ್ಲಿ ಬೆಳಗಿನ ವೇಳೆಯೇ ಚಿರತೆಗಳು ಕಂಡು ಬರುತ್ತಿದೆ. ಆದ್ದರಿಂದ, ಅರಣ್ಯ ಅಧಿಕಾರಿಗಳು ಚಿರತೆ ಉಪಟಳ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ








