ಮಂಡ್ಯ : ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಕ್ಯಾಬಿನೆಟ್ ಗೆ ತಂದಿದ್ದರು. ಆದರೆ, ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಆದ್ರೆ, ನಾನು ಮಂಡ್ಯದಲ್ಲೇ ಆಗಲೇಬೇಕು ಅಂದಾಗ ಎಲ್ಲರು ಸುಮ್ಮನಾದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಪ್ರಾರಂಭವಾದ ಮೇಲೆ ಮೊದಲ ಕೃಷಿ ಮೇಳವನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಅವರು ಮಾತನಾಡಿದರು
ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಂದಾಲೋಚನೆಯಿಂದ ಮಂಡ್ಯದಲ್ಲಿ 80 ವರ್ಷಗಳ ಹಿಂದೆಯೇ ಇಲ್ಲಿ ಸಂಶೋಧನಾ ಕೇಂದ್ರವನ್ನು ತೆರೆದಿದ್ದಾರೆ. ಸಂಶೋಧನಾ ಕೇಂದ್ರ ಇದ್ದರೆ ಸಾಲದು ಜಿಲ್ಲೆಯ ಜನತೆಗೆ ವಿಶ್ವ ವಿದ್ಯಾಲಯಯನ್ನು ತೆರೆದರೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಸಚಿವ ಚಲುವರಾಯಸ್ವಾಮಿ ಅವರು ವಿವಿ ಸ್ಥಾಪನೆಗೆ ಕ್ಯಾಬಿನೆಟ್ ಗೆ ತಂದರು. ಕ್ಯಾಬಿನೆಟ್ ನಲ್ಲಿ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನನಗೂ ಇದು ಸೂಕ್ತ ಅನ್ನಿಸಿತು. ಹೀಗಾಗಿ ನಾನು ಮಂಡ್ಯದಲ್ಲೇ ಆಗಲೇಬೇಕು ಅಂದಾಗ ಎಲ್ಲರೂ ಸುಮ್ಮನಾದರು ಎಂದರು.
ಐದು ಜಿಲ್ಲೆಗಳನ್ನ ಪ್ರತಿನಿಧಿಸುವ ವಿವಿ ಇದಾಗಿದೆ. ಐದು ಜಿಲ್ಲೆಗಳಲ್ಲಿ ಬೆಳೆಯುವ ಬೆಳೆಗಳು ಇಂದು ಪ್ರದರ್ಶನ ಆಗುತ್ತಿದೆ. ಇದು ಎಲ್ಲಾ ರೈತರಿಗೂ ಗೊತ್ತಾಗಬೇಕು. ಹೊಸ ತಂತ್ರಜ್ಞಾನ, ತಳಿಗಳ ಮಾಹಿತಿ ರೈತರಿಗೆ ತಲುಪಬೇಕು. ಲ್ಯಾಬ್ ನಿಂದ ಲ್ಯಾಂಡ್ ವರೆಗೂ ತಲುಪಬೇಕು. ಆಗ ಮಾತ್ರ ಕೃಷಿ ಕ್ಷೇತ್ರದಲ್ಲಿ ಮೌಲ್ಯವರ್ಧನೆಯಿಂದ ಕೃಷಿ ಲಾಭದಾಯಕ ಆಗಲು ಸಾಧ್ಯವಾಗಲಿದೆ. ಸದ್ಯ ಕೃಷಿಯಿಂದ ಯುವಕರು ಹೆಚ್ಚು ವಿಮುಖರಾಗ್ತಿದ್ದಾರೆ. ನಾನು ಕೂಡ ಬಿಎಸ್ಸಿ ಓದುವವರೆಗೂ ನಾನು ಕೃಷಿ ಮಾಡ್ತಿದ್ದೆ. ಈಗ ಕೃಷಿ ಲಾಭದಾಯಕವಾ ಇಲ್ಲವಾ ಎನ್ನುವ ಪ್ರಶ್ನೆ ಎದ್ದಿದೆ. ಕೃಷಿಯನ್ನು ಲಾಭದಾಯಕ ಮಾಡಲು ಏನು ಮಾಡಬೇಕು. ಈ ಬಗ್ಗೆ ವಿಶ್ವ ವಿದ್ಯಾಲಯ ಅರ್ಥ ಮಾಡಿಸಬೇಕು. ಕೂಲಿಕಾರರ ಸಮಸ್ಯೆ ಹೋಗಲಾಡಿಸಲು ಯಂತ್ರೋಪಕರಣ ಬಳಸಬೇಕು. ಸರ್ಕಾರ ಅದಕ್ಕೆ ಎಲ್ಲಾ ರೀತಿಯ, ಸಹಕಾರ, ಬೆಂಬಲ, ಉತ್ತೇಜನ ನೀಡುತ್ತಿದ್ದು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕೆಂದರು.
ಫಿಲಿಫೈನ್ಸ್ ನಲ್ಲಿ ಒಂದೇ ಗಿಡದಲ್ಲಿ ಮೂರು ಬೆಳೆ ಬೆಳೆಯುತ್ತಿದ್ದಾರೆ. ಅದೇ ಮಾದರಿಯಲ್ಲಿ ನಾವು ಒಂದೇ ಗಿಡದಲ್ಲಿ ಎರಡು ಬೆಳೆ ಬೆಳೆಯುತ್ತಿದ್ದೇವೆ. ಟೊಮೇಟೊ, ಬದನೇಕಾಯಿ ಬೆಳೆಯುವಲ್ಲಿ ವಿ.ಸಿ.ಫಾರಂ ಕೃಷಿ ವಿವಿ ಯಶಸ್ವಿಯಾಗಿದೆ. ಮುಂದಿನ ವರ್ಷದಿಂದ ಮೈಸೂರಿನಲ್ಲಿ ಅಂತರರಾಷ್ಟ್ರೀಯ ಸ್ಯಾಂಡ್ ವಿಚ್ ಸ್ನಾತಕೋತ್ತರ ಪದವಿ ಆರಂಭಿಸಲು ಕ್ರಮವಹಿಸಲಾಗುವುದು.
ರೈತ ನಾಯಕ ಹಾಗೂ ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೆಸರಲ್ಲಿ ವಿಸಿ ಫಾರಂ ನಲ್ಲಿ ಒಂದು ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಕೃಷಿ ವಿವಿಯ ವಿಶೇಷಾಧಿಕಾರಿಗೆ ಸೂಚನೆ ನೀಡಿದರು.
ಕೃಷಿ ಕ್ಷೇತ್ರದ ಅಸಮಾನತೆ ಹೋಗಲಾಡಿಸಲು ಅನೇಕ ಕಾರ್ಯಕ್ರಮ ಮಾಡಿದ್ದೇವೆ. ನಾವು ಯಶಸ್ವಿಯಾಗಲು ಎಲ್ಲಾ ವರ್ಗದವರಿಗೂ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಬರಬೇಕು. ಇದನ್ನ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಹೀಗಾಗಿ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶಕ್ತಿ ತುಂಬುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರ ಮಾತ್ರ ರಾಜ್ಯದ ಮೇಲೆ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಜೋಳ, ಕಬ್ಬು ದರ ಏರಿಕೆ ಮಾಡ್ತಿಲ್ಲ. ಕಬ್ಬಿಗೆ ಎಫ್ ಆರ್ ಪಿ ದರ ನಿಗದಿ ಮಾಡ್ತಿಲ್ಲ. ನಾವು ಟನ್ ಗೆ 100 ರೂ. ಹೆಚ್ಚಿಗೆ ದರ ನಿಗದಿ ಮಾಡಿದ್ದೇವೆ. ಮೆಕ್ಕೆಜೋಳ ಹೆಚ್ಚಳಕ್ಕೆ ನಾವು ಈಗಾಗಲೇ ತೀರ್ಮಾನ ಮಾಡಿದ್ದೇವೆ. ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಪರ ಇದೆ. ಮಂಡ್ಯ ಶುಗರ್ ಫ್ಯಾಕ್ಟರಿ ಉಳಿಯಲಿ ಅಂತ ನೂರಾರು ಕೋಟಿ ಅನುದಾನ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಬಾಯ್ಲಿಂಗ್ ಹೌಸ್ ಮಾಡಲು ಕ್ರಮ ವಹಿಸಲಾಗುವುದು. ಕಬ್ಬಿನ ಇಳುವರಿ ಆಧಾರದ ಮೇಲೆ ದರ ನಿಗದಿ ಮಾಡಲಾಗ್ತಿದೆ. ಹೀಗಾಗಿ ಹೆಚ್ಚಿನ ಇಳುವರಿಗೆ ಕ್ರಮ ವಹಿಸಬೇಕಾಗಿದೆ. ಮಹಾರಾಷ್ಟ್ರದಲ್ಲಿ ಇಳುವರಿ 13-14 ಇದೆ. ಇಲ್ಲಿ ಒಂಭತ್ತೂವರೆ ಮಾತ್ರ ಇದೆ. ಅದಕ್ಕೆ ಕಾರಣ ಏನು ಎಂಬುದನ್ನ ಪತ್ತೆ ಹಚ್ಚಬೇಕು. ಅದಕ್ಕೆ ಪರಿಹಾರ ಕಂಡುಕೊಂಡು, ಹೆಚ್ಚು ಇಳುವರಿ ಬರುವ ತಳಿ ಕಂಡು ಹಿಡಿಯುವಂತೆ ಕೃಷಿ ವಿವಿ ವಿಶೇಷಾಧಿಕಾರಿಗೆ ಸೂಚನೆ ನೀಡಿದರು.
ವರದಿ : ಗಿರೀಶ್ ರಾಜ್, ಮಂಡ್ಯ
ಜ.3, 4ರಂದು ಸಾಗರದಲ್ಲಿ ‘ಸಾಗರೋತ್ಸವ’: ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ‘ಭಿತ್ತಿಪತ್ರ ಬಿಡುಗಡೆ’
ನಾನು, ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು ನಿಜ: ಡಿಸಿಎಂ ಡಿ.ಕೆ. ಶಿವಕುಮಾರ್








