ತಮಿಳುನಾಡು : ಮಕ್ಕಳು ಬಾಯಲ್ಲಿ ಏನೇ ಹಾಕಿಕೊಂಡರು ಪೋಷಕರಾದವರು ಮೊದಲು ಆ ಕುರಿತು ಎಚ್ಚರ ವಹಿಸಿವುದು ಸೂಕ್ತ. ಇಲ್ಲವಾದರೆ ಅನಾಹುತ ಆಗುವ ಸಂಭವ ಇರುತ್ತೆ. ಇದೀಗ ಬಾಳೆಹಣ್ಣು ತಿಂದು ಉಸಿರುಗಟ್ಟಿ 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ತಮಿಳುನಾಡಿನಾದ್ಯಂತ ತೀವ್ರ ಆಘಾತವನ್ನುಂಟು ಮಾಡಿದೆ. ಈರೋಡ್‌ನ ಬಾಲಕನ ಶವವನ್ನು ಈರೋಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಪೋಷಕರಿಗೆ ಹಸ್ತಾಂತರಿಸಲಾಯಿತು.
ಹೌದು ಈರೋಡ್‌ನ ಅನ್ನೈ ಸತ್ಯ ನಗರದ ಎಂ. ಸಾಯಿಶರಣ್ ಎಂಬ ಬಾಲಕ ಮನೆಯಲ್ಲಿ ಬಾಳೆಹಣ್ಣು ತಿನ್ನುವಾಗ ಅದು ಗಂಟಲಲ್ಲಿ ಸಿಕ್ಕಿಹಾಕಿಕೊಂಡು, ಉಸಿರಾಡಲಾಗದೆ ಸಾವನ್ನಪ್ಪಿದ್ದಾನೆ. ಈರೋಡ್ ಜಿಲ್ಲೆಯ ಅನ್ನೈ ಸತ್ಯ ನಗರ ಪ್ರದೇಶದ ಮಾಣಿಕ್ಕಂ-ಮಹಾಲಕ್ಷ್ಮಿ ದಂಪತಿಗೆ 5 ವರ್ಷದ ಸಾಯಿಶರಣ್ ಎಂಬ ಮಗ ಮತ್ತು 2 ವರ್ಷದ ಮಗಳಿದ್ದಾರೆ.
ದಂಪತಿಗಳಿಬ್ಬರೂ ಕೂಲಿ ಕೆಲಸ ಮಾಡುವುದರಿಂದ ಅವರು ಸಾಮಾನ್ಯವಾಗಿ ಇಬ್ಬರೂ ಮಕ್ಕಳನ್ನು ಅಜ್ಜಿಯ ಮನೆಯಲ್ಲಿ ಬಿಡುತ್ತಿದ್ದರು. ಮಂಗಳವಾರ ರಾತ್ರಿ ಆ ಹುಡುಗನ ಅಜ್ಜಿ ಸಾಯಿಶರಣ್‌ಗೆ ತಿನ್ನಲು ಬಾಳೆಹಣ್ಣನ್ನು ಕೊಟ್ಟರು.ಹಣ್ಣು ತಿಂದ ಹುಡುಗ ಅದನ್ನು ನುಂಗಲು ಕಷ್ಟಪಡುತ್ತಿದ್ದನು. ಆ ಬಾಳೆಹಣ್ಣು ಹುಡುಗನ ಶ್ವಾಸನಾಳದಲ್ಲಿ ಸಿಲುಕಿಕೊಂಡಿತು. ಇದರಿಂದ ಬಾಲಕನಿಗೆ ಉಸಿರಾಡಲು ತೊಂದರೆಯಾಯಿತು.
ಪುಟ್ಟ ಬಾಲಕ ಸಾಯಿ ಶರಣ್ ಮನೆಯಲ್ಲಿ ಬಾಳೆಹಣ್ಣು ತಿನ್ನುತ್ತಿದ್ದಾಗ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಇದರಿಂದ ಆಘಾತಕ್ಕೊಳಗಾದ ಪೋಷಕರು ತಕ್ಷಣ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು, ಆತನ ಶ್ವಾಸನಾಳದಲ್ಲಿ ಬಾಳೆಹಣ್ಣಿನ ತುಂಡು ಸಿಲುಕಿಕೊಂಡಿರುವುದನ್ನು ಪತ್ತೆಹಚ್ಚಿದರು.
ನಂತರ ವೈದ್ಯರು ಆ ಮಗುವನ್ನು ಚಿಕಿತ್ಸೆಗಾಗಿ ಈರೋಡ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು.ಆದರೆ, ಅಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಉಸಿರಾಡಲಾಗದೆ ಮೃತಪಟ್ಟಿದೆ ಎಂದು ಘೋಷಿಸಿದರು. ನಂತರ ಬಾಳೆಹಣ್ಣಿನ ತುಂಡನ್ನು ಮಗುವಿನ ಶ್ವಾಸನಾಳದಿಂದ ತೆಗೆದುಹಾಕಲಾಯಿತು. ಕರುಂಗಲ್‌ಪಾಳಯಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








