ಕೊಳ್ಳೆಗಾಲ, ಡಿ.3: ಮಾನವ-ಹುಲಿ ಸಂಘರ್ಷದ ಹಿನ್ನೆಲೆಯಲ್ಲಿ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ತಿಂಗಳ ಅವಧಿಯಲ್ಲಿ 22 ಹುಲಿ ಮತ್ತು ಮರಿಗಳ ರಕ್ಷಣೆ ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಕೊಳ್ಳೆಗಾಲದಲ್ಲಿಂದು ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕಾಗಿ ಕಮಾಂಡ್ ಸೆಂಟರ್ ಉದ್ಘಾಟಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ ಕೊನೆಯವಾರ ಮತ್ತು ನವೆಂಬರ್ ಮೊದಲ ವಾರದಲ್ಲಿ ಹುಲಿಗಳ ದಾಳಿಯಿಂದ ಅಮೂಲ್ಯ ಜೀವ ಹಾನಿ ಆದ ಹಿನ್ನೆಲೆಯಲ್ಲಿ ಕಾಡಿನ ಹೊರಗೆ ಸಂಚರಿಸುತ್ತಿರುವ ಹುಲಿಗಳ ಸೆರೆ (ರಕ್ಷಣೆ)ಗೆ ಆದೇಶ ನೀಡಲಾಗಿತ್ತು ಎಂದು ತಿಳಿಸಿದರು.
ಅಧಿವೇಶನದ ಬಳಿಕ ಯಸಳೂರಲ್ಲಿ ಅರ್ಜುನ ಸ್ಮಾರಕ ಉದ್ಘಾಟನೆ:
ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಆನೆ ಅರ್ಜುನನ ಸ್ಮಾರಕವನ್ನು ಹುತಾತ್ಮನಾದ ಸ್ಥಳ ಯಸಳೂರಿನಲ್ಲಿ ಮತ್ತು ಅರ್ಜುನ ಇದ್ದ ಶಿಬಿರ ಬಳ್ಳೆಯಲ್ಲಿ ನಿರ್ಮಿಸುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ಸ್ಮಾರಕ ನಿರ್ಮಾಣವಾಗಿದ್ದು, ಬಳ್ಳೆಯಲ್ಲಿ ಈಗಾಗಲೇ ಉದ್ಘಾಟನೆ ನೆರವೇರಿದೆ. ಶಾಸಕರ ಸಲಹೆಯಂತೆ ಕೆಲವೊಂದು ಮೂಲಭೂತ ಸೌಕರ್ಯವನ್ನು ಯಸಳೂರಿನಲ್ಲಿ ಕಲ್ಪಿಸಲಾಗುತ್ತಿದ್ದು, ಅಧಿವೇಶನದ ಬಳಿಕ ಉದ್ಘಾಟನೆ ನೆರವೇರಿಸುವುದಾಗಿ ತಿಳಿಸಿದರು.








