ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿಗೆ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ನವ ವಿವಾಹಿತೆ ಒಬ್ಬಳು ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆ ಪೋಲಿಸರು ಪತಿಯನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಅಂದ್ರಹಳ್ಳಿಯ ವಿದ್ಯಮಾನ್ಯ ನಗರದಲ್ಲಿ ಅಮೂಲ್ಯ (23) ಗಂಡ ಅಭಿಷೇಕ್ ಮನೆಯಲ್ಲಿ ನೇಣಿಗೆ ಶರಣಾದ ವಿವಾಹಿತೆ ಎಂದು ತಿಳಿದುಬಂದಿದೆ. ಅಮೂಲ್ಯ-ಅಭಿಷೇಕ್ ಪ್ರೇಮಕ್ಕೆ ಮನೆಯವರ ವಿರೋಧವಿತ್ತು. ಕೊನೆಗೆ ಹೇಗೋ ಇಬ್ಬರು ಕುಟುಂಬದವರನ್ನ ಒಪ್ಪಿಸಿ ಮೂರು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಮೃತ ಅಮೂಲ್ಯ ಕುಟುಂಬಸ್ಥರು ಮಗಳ ಸಾವಿಗೆ ಪತಿ ಅಭಿಷೇಕ್ ಕಾರಣ ಅಂತ ಆರೋಪಿಸಿದ್ದಾರೆ. ಪತಿಗೆ ಪತ್ನಿಯ ಮೇಲೆ ಅನುಮಾನ ಇತ್ತು, ಯಾರ ಜೊತೆಗೂ ಮಾತಾಡೋಕೆ ಬಿಡ್ತಾ ಇರಲಿಲ್ಲ. ಆಡುಗೆ ಮಾಡೋಕೆ ಬರಲ್ಲ ಅಂತಾ ಕಿರುಕುಳ ಕೊಡ್ತಾ ಇದ್ರು. ಅವ್ರೇ ಹೊಡೆದು ಕೊಲೆ ಮಾಡಿದ್ದಾರೆ ಅಂತಲೂ ಆರೋಪಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








