ಮಂಡ್ಯ : ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ ಮಂಡ್ಯ ಜಿಲ್ಲೆಗೆ 10 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತರಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಕೊಪ್ಪದ ಗ್ರಾಪಂ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮ ಹಾಗೂ 140 ಕೋಟಿ ರೂ.ಗಳ ವಿವಿಧ ಕಾಮಗಾರಿಗಳ ಶಂಕು ಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದವರು ಇಂದು ರಾಷ್ಟ್ರಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡಿದಷ್ಟು ಇನ್ಯಾವುದೇ ರಾಜ್ಯಗಳಲ್ಲಿ ನೀಡಿಲ್ಲ ಎಂದು ಹೇಳಿದರು.
ಪಂಚ ಗ್ಯಾರಂಟಿಗಳ ಮೂಲಕ ಪ್ರತಿ ತಾಲೂಕಿಗೆ ವಾರ್ಷಿಕ 250 ರೂ.ಕೋಟಿ ಅನುದಾನವನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲೂ ಸಹ ಗ್ಯಾರಂಟಿ ಯೋಜನೆ ಮುಂದುವರೆಯುತ್ತದೆ. ಮುಂದಿನ 2028ರ ಚುನಾವಣೆಯಲ್ಲೂ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಲಾಗುವುದು ಎಂದು ತಿಳಿಸಿದರು.
ಕೃಷಿ ಇಲಾಖೆ ವತಿಯಿಂದ ಈ ವರ್ಷದ ಏಪ್ರಿಲ್ ನಿಂದ ಇಲ್ಲಿಯವರೆಗೂ ಕೊಪ್ಪ ಹೋಬಳಿಯ 520 ಫಲಾನುಭವಿಗಳಿಗೆ 150 ಕೋಟಿ ರೂಗಳ ಸಹಾಯಧನ ನೀಡಲಾಗಿದೆ. ಒಟ್ಟು ಜಿಲ್ಲೆಯಲ್ಲಿ 49,330 ಫಲಾನುಭವಿಗಳಿಗೆ ಕೃಷಿ ಇಲಾಖೆಯ ವಿವಿಧ ಯೋಜನೆಗಳಿಂದ 2390.80 ಲಕ್ಷಗಳ ಸಹಾಯಧನ ನೀಡಲಾಗಿದೆ. ಒಬ್ಬರಿಗೆ ಸುಮಾರು 50 ಲಕ್ಷದವರೆಗೂ ಸಬ್ಸಿಡಿ ನೀಡಲಾಗಿದೆ ಎಂದರು.
ನಮ್ಮ ಸರ್ಕಾರ ವಿವಿಧ ಯೋಜನೆಗಳ ಮೂಲಕ ಜನರಿಗೆ ಅಭಿವೃದ್ಧಿ ಕಾರ್ಯವನ್ನು ಮಾಡಲಾಗುತ್ತಿದೆ. ಕೊಪ್ಪ ಹೋಬಳಿಯಲ್ಲಿ ಇಲ್ಲಿಯವರೆಗೆ 1300 ಹೊಸ ಪೌತಿ ಖಾತೆ, 5800 ಹಳೆ ಪೌತಿ ಖಾತೆ ಹಾಗೂ 150 ಪೊಡಿ ಗಳನ್ನು ಪೌತಿ ಖಾತೆ ಆಂದೋಲನದ ಮೂಲಕ ಮಾಡಲಾಗಿದ್ದು, ಜಿಲ್ಲೆಯಲ್ಲಿ ಸುಮಾರು 18.31 ಸಾವಿರ ಕಂದಾಯ ಇಲಾಖೆಯ ದಾಖಲೆ ಹಾಳೆಗಳನ್ನು ಈಗಾಗಲೇ ಸ್ಕ್ಯಾನ್ ಮಾಡಲಾಗಿದೆ. 33 ಸಾವಿರ ಕಂದಾಯ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಹೇಳಿದರು.
ಕೃಷಿ ಸಚಿವನಾದ ನಂತರವೂ ಸಹ ಪ್ರತಿ ವಾರ ಕನಿಷ್ಠ ಒಂದು ಬಾರಿಯಾದರೂ ಜಿಲ್ಲೆಗೆ ಬಂದು ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಿದ್ದೇನೆ. ನಮ್ಮ ರಾಜ್ಯದಲ್ಲಿ ಸುಮಾರು ಶೇ. 60 ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ನಾನು ಕೃಷಿ ಸಚಿವನಾಗಿರುವುದರಿಂದ ಜವಾಬ್ದಾರಿ ಹೆಚ್ಚಿದೆ ಜನರು ಸಚಿವರ ಕಚೇರಿಗೆ ಭೇಟಿ ನೀಡಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ಕಾನೂನಿನ ಪ್ರಕಾರ ಮಾಡಬಹುದಾದ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡುವರೆ ವರ್ಷಗಳಿಂದ ಕೊಪ್ಪ ಹೋಬಳಿಯ ಅಭಿವೃಧ್ಧಿಗೆ ಸರಿಸುಮಾರು 300 ರಿಂದ 400 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕೊಪ್ಪದಲ್ಲಿ ನಾಡಕಚೇರಿ ತೆರೆಯಲು 45 ಲಕ್ಷ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ ರೈತರ ಅಭಿವೃದ್ಧಿಗಾಗಿ ಜಿಲ್ಲೆಗೆ ಕೃಷಿ ವಿಶ್ವವಿದ್ಯಾನಿಲಯವನ್ನು ತರಲಾಗಿದೆ. ಫಿಲಿಪೈನ್ಸ್ ದೇಶದ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ನಮ್ಮ ವಾತಾವರಣಕ್ಕೆ ಸರಿಹೊಂದುವ ಹೊಸ ಭತ್ತದ ತಳಿಗಳನ್ನು ಜಿಲ್ಲೆಗೆ ತರಲು ಒಡಂಬಡಿಕೆ ಮಾಡಲಾಗಿದೆ. ಈಗಾಗಲೇ ಗುರುತಿಸಲಾದ ಭತ್ತದ ತಳಿಯನ್ನು ನಮ್ಮದೇ ರಾಜ್ಯದ ನಾಗಮಂಗಲ ಹಾಗೂ ಮಳವಳ್ಳಿಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಯನ್ನು ರಾಜ್ಯಕ್ಕೆ ತರಲಾಗುವುದು ಎಂದು ಹೇಳಿದರು.
ಜಿಲ್ಲೆಯ ರೈತರ ಬೇಡಿಕೆಗೆ ಸ್ಪಂದಿಸಿ ಮುಂದಿನ ಸೋಮವಾರದಿಂದ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ನೋಂದಣಿ ರೈತರಿಂದ ಬಂದಿಲ್ಲವಾದರು ಭತ್ತ ಮತ್ತು ರಾಗಿ ಖರೀದಿಯನ್ನು ಪ್ರಾರಂಭಿಸಲಾಗುವುದು ಎಂದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಭಾವುಕರಾದ ಕೃಷಿ ಸಚಿವರು
ಜನಸ್ಪಂದನ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಭಾವುಕರಾದ ಪ್ರಸಂಗ ಜರುಗಿತು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಾವು ಎಷ್ಟೇ ಪ್ರಾಮಾಣಿಕವಾಗಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು ಕೆಲವರಿಗೆ ತೃಪ್ತಿಯೇ ಇಲ್ಲ, ಕಳೆದ ಬಾರಿಯ ಸರ್ಕಾರ ಕಳೆದ ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮತ್ತು ನಮ್ಮ ಸರ್ಕಾರ ಬಂದ ಎರಡುವರೆ ವರ್ಷದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕೆಲಸಗಳನ್ನು ಅವಲೋಕಿಸಿ ನೋಡಿ ಯಾರೂ ಎಷ್ಟು ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ನಿಮಗೆ ಸ್ಪಷ್ಟತೆ ದೊರೆಯುತ್ತದೆ ಎಂದು ಹೇಳಿದರು.
2018 ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಸ್ಥಾನ ಗಿಟ್ಟಿಸಿಕೊಂಡ ಕುಮಾರಸ್ವಾಮಿ ಅವರು ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಘೋಷಣೆ ಮಾಡಿದರು. ಆದರೆ ಇಂದಿಗೂ ಎಷ್ಟೋ ರೈತರ ಸಾಲ ಮನ್ನವಾಗಿಲ್ಲ ಜತೆಗೆ ಅವರ ಸರ್ಕಾರದಲ್ಲಿ ಮನ್ನಾ ಮಾಡಿದ ಸಾಲದ ಮೊತ್ತ ನಮ್ಮ ಸರ್ಕಾರ ಪಾವತಿಸುತ್ತಿದೆ. ಇಲ್ಲಿಯವರೆಗೆ 480 ಕೋಟಿಯಷ್ಟು ಸಾಲವನ್ನು ಪಾವತಿಸಿದೆ ಹಾಗೂ ಇನ್ನೂ 400 ರಿಂದ 500 ಕೋಟಿ ಬಾಕಿ ಉಳಿದಿದೆ ಎಂದು ಹೇಳಿದರು.
ನಾನು ನಾಲ್ಕು ಬಾರಿ ಶಾಸಕನಾಗಿ ಹಾಗೂ ಒಂದು ಬಾರಿ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ನಾಗಮಂಗಲ ಕ್ಷೇತ್ರದಿಂದ ಶಾಸಕ ಸ್ಥಾನಕ್ಕಾಗಿ 2018 ರಲ್ಲಿ ಸ್ಪರ್ಧಿಸಿದಾಗ ಜನರು ಸರಿಸುಮಾರು 50 ಸಾವಿರ ಮತಗಳ ಅಂತರದಿಂದ ಸೋಲಿಸಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಕಾರ್ಯಗಳು ಮಾಡಿದ್ದೆ ಆದರೂ ಜನರು ನನ್ನ ಕೈ ಹಿಡಿಯಲಿಲ್ಲ ಎಂದು ಭಾವುಕರಾದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, 3500 ಕೋಟಿ ಅನುದಾನವನ್ನು ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ ಕೃಷಿ ಸಚಿವರು ತಂದಿದ್ದಾರೆ. ಜಿಲ್ಲೆಯ ಇತಿಹಾಸದಲ್ಲೇ ಯಾರು ನೀರಾವರಿ ಅಭಿವೃದ್ಧಿಗೆ ಇಷ್ಟು ಅನುದಾನವನ್ನು ತಂದಿಲ್ಲ. ಕೊಪ್ಪ ಭಾಗದ ವಿವಿಧ ಕಾಮಗಾರಿಗಳಿಗೆ 137.99 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.
ಮಂಡ್ಯ ಜನರ ಜೀವನಾಡಿ ಮೈ ಶುಗರ್ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಕೃಷಿ ಸಚಿವರು ಮುಖ್ಯಮಂತ್ರಿಗಳ ಬಳಿ ಇದರ ಕುರಿತು ಪ್ರಸ್ಥಾಪಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಕೋಟಿ ಅನುದಾನವನ್ನು ಮೈಶುಗರ್ ಕಾರ್ಖಾನೆ ಬಿಡುಗಡೆ ಮಾಡಿ ಮೈ ಶುಗರ್ ಕಾರ್ಖಾನೆ ಪುನಶ್ಚೇತನ ಮಾಡಿದ್ದಾರೆ ಎಂದು ತಿಳಿಸಿದರು.
ಜನಸ್ಪಂದನ ಸಭೆಯಲ್ಲಿ 191 ಅರ್ಜಿ ಸ್ವೀಕಾರ
ಕೊಪ್ಪ ಹೋಬಳಿಯ 8 ಗ್ರಾಪಂಗಳಿಂದ ಆಗಮಿಸಿದ್ದ ಸಾರ್ವಜನಿಕರು ಮತ್ತು ರೈತರು ಕಂದಾಯ ಇಲಾಖೆಗೆ 90, ಗ್ರಾಮೀಣಾಭಿವೃದ್ಧಿಗೆ 54, ಆಹಾರ ಇಲಾಖೆಗೆ 1, ಸಾರಿಗೆ ಇಲಾಖೆಗೆ 1, ಇಂಧನ ಇಲಾಖೆಗೆ 10, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 8, ಕಾವೇರಿ ನೀರಾವರಿ ನಿಗಮಕ್ಕೆ 3 ಅರ್ಜಿಗಳು ಒಟ್ಟು 191 ಅರ್ಜಿಗಳನ್ನು ಸ್ವೀಕಾರ ಮಾಡಲಾಯಿತು.
ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ಕೇಂದ್ರಗಳನ್ನು ತೆರೆದು ಅರಿವು ಮೂಡಿಸಲಾಯಿತು. ಸರ್ಕಾರದಿಂದ ಸಿಗುವ ಹತ್ತು ಹಲವು ಸವಲತ್ತುಗಳನ್ನು ಅರ್ಹ ಪಲಾನುಭವಿಗಳಿಗೆ ಸಭೆಯಲ್ಲಿ ವಿತರಣೆ ಮಾಡಲಾಯಿತು.
ಕೊಪ್ಪ ಗ್ರಾಮದಿಂದ ನಾಗಮಂಗಲ ಮಾರ್ಗವಾಗಿ ಬಿಜಿ ನಗರಕ್ಕೆ ಹೊಸದಾಗಿ ಸರ್ಕಾರಿ ಸಾರಿಗೆಗೆ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಎನ್.ಚಲುವರಾಯಸ್ವಾಮಿ, ನಿರ್ದೆಶಕ ಕೆ.ಸಿ.ಜೋಗಿಗೌಡ, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕೆ ವಿಜಯಲಕ್ಷ್ಮಿ ರಘುನಂದನ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೆರೆ, ತಾಪಂ ಇಒ ರಾಮಲಿಂಗಯ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಕಾವೇರಿ ನೀರಾವರಿ ನಿಗಮದ ಸೂಪರಿಂಟೆಂಡೆಂಟ್ ರಘುರಾಮ್, ಗ್ರಾಪಂ ಅಧ್ಯಕ್ಷ ಸಂತೋಷ್ ಕೊಟ್ಟಿಗೆಯಾರ್, ಸದಸ್ಯರಾದ ಫರ್ವೆಜ್ ಅಹಮದ್, ಕುಮಾರ್ ಕೊಪ್ಪ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ತಾಪಂ ಮಾಜಿ ಉಪಾಧ್ಯಕ್ಷ ಬೆಕ್ಕಳಲೆ ರಘು, ಮುಖಂಡರಾದ ಚಿಕ್ಕೊನಹಳ್ಳಿ ತಮ್ಮಯ್ಯ, ಕ್ರಾಂತಿಸಿಂಹ ಇತರರಿದ್ದರು.
ಮಂಡ್ಯದ ಮದ್ದೂರು ಪೇಟೆ ಬೀದಿ ಅಗಲೀಕರಣ; ಡಿ.6ರಂದು ಸಾರ್ವಜನಿಕರ ಸಭೆ ಕರೆದ ಶಾಸಕ ಕೆ.ಎಂ.ಉದಯ್
BREAKING: ಕಾವೇರಿ ನದಿ ತೀರ ಒತ್ತುವರಿ ತೆರವಿಗೆ ಉಪ ಲೋಕಾಯುಕ್ತ ನ್ಯಾ.ವೀರಪ್ಪ ಆದೇಶ








